ಬಿಎಸ್‌ವೈ ವಿರುದ್ಧ ಡಿವಿಎಸ್ ದೂರು, ಭುಗಿಲೆದ್ದ ಭಿನ್ನಮತ

ಈ ಭಿನ್ನಮತಕ್ಕೆ ಪ್ರಮುಖ ಕಾರಣ ಸದಾನಂದ ಗೌಡ ಅವರು ಯಡಿಯೂರಪ್ಪ ಮತ್ತು ಅವರ ಕೆಲ ಬೆಂಬಲಿಗ ಶಾಸಕರ ವಿರುದ್ಧ ಸದಾನಂದ ಗೌಡ ಅವರು ಹೈಕಮಾಂಡಿಗೆ ಪತ್ರ ಬರೆದಿದ್ದಾರೆ. ಇವರೆಲ್ಲ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರಿಂದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಇವರ ವಿರುದ್ಧ ಪತ್ರ ಬರೆಯಬೇಕು ಎಂದು ಕೋರಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ವಿರುದ್ಧ, ನಯವಾಗಿ ಮಾತನಾಡುತ್ತಲೇ ಕೆಂಡಕಾರುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೂಡ ಬಿಜೆಪಿ ಹೈಕಮಾಂಡಿಗೆ ಮತ್ತೊಂದು ಪತ್ರದಲ್ಲಿ ದೂರಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಂಪುಟ ವಿಸ್ತರಣೆಗಾಗಿ ಕಾದು ಕುಳಿತಿರುವ ಬಿಜೆಪಿ ಬೆಂಬಲಿಗ ಶಾಸಕರು ಕಾದು ಕುಳಿತಿರುವ ಹಂತದಲ್ಲಿ ಪತ್ರ ರವಾನೆಯಾಗಿರುವುದು ಯಡಿಯೂರಪ್ಪನವರನ್ನು ಸಾಕಷ್ಟು ಕೆರಳಿಸಿದೆ.
ಬುಸುಗುಡುತ್ತಿರುವ ಯಡಿಯೂರಪ್ಪ : ಬಿಜೆಪಿ ಹೈಕಮಾಂಡಿಗೆ ಡಿವಿಎಸ್ ಮತ್ತು ಕೆಎಸ್ಈ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿರುವುದು ತಿಳಿಯುತ್ತಿದ್ದಂತೆ ದೂರ್ವಾಸ ಮುನಿಯಂತೆ ಸಿಟ್ಟಿಗೆದ್ದಿರುವ ಯಡಿಯೂರಪ್ಪ, ಕೂಡಲೆ ಶಾಸಕಾಂಗ ಪಕ್ಷದ ಸಭೆಯನ್ನು ಕರೆಸಬೇಕು ಮತ್ತು ಪತ್ರ ಬರೆದಿರುವ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಡಿವಿಎಸ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿರುವ 19 ಶಾಸಕರು ಸಹಿ ಹಾಕಿದ್ದಾರೆ.
2011ರ ಆಗಸ್ಟ್‌ನಲ್ಲಿ ಅಕ್ರಮ ಗಣಿಗಾರಿಕೆ ವರದಿಯಲ್ಲಿ ತಮ್ಮ ಹೆಸರು ಕೇಳಿಬಂದಿದ್ದರಿಂದ ಯಡಿಯೂರಪ್ಪ ಮುಖ್ಯಮಂತ್ರಿ ಪದವಿಗೆ ಬಲವಂತವಾಗಿ ರಾಜೀನಾಮೆ ನೀಡಿದ್ದರು. ತದನಂತರ ಸಾಕಷ್ಟು ಚೌಕಾಶಿ ನಡೆದನಂತರ ಸದಾನಂದ ಗೌಡರನ್ನು ಪಟ್ಟದಲ್ಲಿ ಕುಳ್ಳಿರಿಸಲು ಯಡಿಯೂರಪ್ಪ ಸಮ್ಮತಿಸಿದ್ದರು. ಅದೂ, ಆರು ತಿಂಗಳು ಮಾತ್ರ ಎಂದು ಹಿರಿಯರಿಂದ ಮಾತು ಪಡೆದುಕೊಂಡಿದ್ದರು.
ಅದಾದನಂತರ ಸಾಲುಸಾಲು ಹಗರಣಗಳಲ್ಲಿ ಕಾಣಿಸಿಕೊಂಡಿರುವ ಯಡಿಯೂರಪ್ಪ ಅವರನ್ನು ಮತ್ತೆ ಪಟ್ಟಕ್ಕೆ ತರಲು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಹಿಡಿದು ಅನೇಕರಿಗೆ ಇಷ್ಟವಿಲ್ಲ. ಆದರೂ, ಯಡಿಯೂರಪ್ಪ ಮತ್ತೆ ಪಟ್ಟಕ್ಕೇರುವ ತಮ್ಮ ಪಟ್ಟನ್ನು ಸಡಿಲಿಸುತ್ತಿಲ್ಲ. ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಹೈಕೋರ್ಟಿನಿಂದ ಕ್ಲೀನ್ ಚಿಟ್ ಪಡೆದ ನಂತರ ಸಮರೋಪಾದಿಯಲ್ಲಿ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಇದು ಸದಾನಂದ ಗೌಡ ಮತ್ತು ಈಶ್ವರಪ್ಪ ಅವರನ್ನು ಸಾಕಷ್ಟು ಮುಜುಗರಕ್ಕೆ ಸಿಲುಕಿಸಿದೆ.
ಇಷ್ಟೆಲ್ಲ ಬಹಿರಂಗ ಗುದ್ದಾಟಗಳು ನಡೆಯುತ್ತಿದ್ದರೂ ಬಿಜೆಪಿ ಹೈಕಮಾಂಡ್ ಮಾತ್ರ ತಟಸ್ಥ ನೀತಿ ತಳೆದು ಕಣ್ಣುಮುಚ್ಚಿ ಕುಳಿತಿರುವುದು ಈ ಭಿನ್ನಮತಕ್ಕೆ ತುಪ್ಪ ಸುರಿದಂತಾಗಿದೆ. ಹಾಗಾಗಿ, ಅಸಮಾಧಾನದ ಗಾಳಿ ಬೀಸಿದಾಗಲೆಲ್ಲ ಭಿನ್ನಮತದ ಬೆಂಕಿ ಹಬ್ಬಿಕೊಳ್ಳುತ್ತಲೇ ಬಂದಿದೆ. ಬೇಸತ್ತಿರುವ ಯಡಿಯೂರಪ್ಪ ಬಿಜೆಪಿ ಪಕ್ಷ ತೊರೆದು ತಮ್ಮದೇ ಪಕ್ಷ ಕಟ್ಟುತ್ತಾರೆ ಎಂಬಲ್ಲಿಗೆ ಮಾತುಗಳು ವಿಧಾನಸಭೆಯ ಕಾರಿಡಾರಿನಲ್ಲಿ ಹರಿದಾಡುತ್ತಿವೆ.












Click it and Unblock the Notifications