ಎನ್‌ಸಿಟಿಸಿಯನ್ನು ಕರ್ನಾಟಕ ಏಕೆ ವಿರೋಧಿಸುತ್ತಿದೆ?

Why Karnataka is opposing NCTC
ಬೆಂಗಳೂರು, ಮೇ. 5 : ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕೇಂದ್ರ (NCTC)ಯನ್ನು ಬಲವಾಗಿ ವಿರೋಧಿಸುತ್ತಿರುವ ರಾಜ್ಯಗಳಲ್ಲಿ ಡಿವಿ ಸದಾನಂದ ಗೌಡ ಆಡಳಿತ ಕರ್ನಾಟಕವೂ ಒಂದು. ಈ ಭಯೋತ್ಪಾದನೆ ನಿಗ್ರಹ ಕೇಂದ್ರ ಸ್ಥಾಪನೆಯನ್ನು ವಿರೋಧಿಸುತ್ತಿರುವುದಕ್ಕೆ ಹಲವಾರು ಕಾರಣಗಳನ್ನು ಕೇಂದ್ರಕ್ಕೆ ರಾಜ್ಯ ಸರಕಾರ ನೀಡಿದೆ.

ಭಯೋತ್ಪಾದನೆ ನಿಗ್ರಹ ಕೇಂದ್ರ ಸ್ಥಾಪಿಸಿದರೆ ರಾಜ್ಯದ ಪ್ರಭುತ್ವದ ಮೇಲೆ ಮತ್ತು ಪ್ರಜಾತಂತ್ರದ ಮೇಲೆ ಸವಾರಿ ಮಾಡಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಹೇಳಿದ್ದಾರೆ. ಭಯೋತ್ಪಾದನೆ ತನಿಖೆಗೆ ಮತ್ತು ಭಯೋತ್ಪಾದಕರ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಪೊಲೀಸರ ಕೈಕಟ್ಟಿಹಾಕಿದಂತಾಗುತ್ತದೆ ಎಂದು ಅವರು ವಾದ ಮಂಡಿಸಿದ್ದಾರೆ. ಹಾಗೆಯೆ, ಕೆಲ ತಿದ್ದುಪಡಿಗಳನ್ನು ಶಿಫಾರಸು ಮಾಡಿದ್ದಾರೆ.

ಕರ್ನಾಟಕ ನೀಡಿರುವ ಕಾರಣಗಳು ಕೆಳಗಿನಂತಿವೆ

* ಅಮೆರಿಕಾದ ಎನ್‌ಸಿಟಿಸಿ ಮಾದರಿಯಲ್ಲಿ ಎನ್‌ಸಿಟಿಸಿಯನ್ನು ರೂಪಿಸಲಾಗಿದೆ. ಆದರೆ ಭಾರತ ಹಾಗೂ ಅಮೆರಿಕಾಗಳ ಲೋಕ ತಂತ್ರ ವ್ಯವಸ್ಥೆಯಲ್ಲಿ ಹಲವಾರು ವ್ಯತ್ಯಾಸಗಳಿವೆ. ಸಾರ್ವಜನಿಕರ ರಕ್ಷಣೆ ಹಾಗೂ ಕಾನೂನು ಹಾಗೂ ಸುವ್ಯವಸ್ಥೆ ಭಾರತದಲ್ಲಿ ರಾಜ್ಯ ಸರ್ಕಾರಗಳ ಹೊಣೆಗಾರಿಕೆಯಾಗಿದೆ.

* ಅಮೆರಿಕಾದ ಪ್ರತಿ ರಾಜ್ಯ ತನ್ನದೇ ಆದ ಪ್ರತ್ಯೇಕ ಕಾಯ್ದೆಗಳನ್ನು ಹೊಂದಿದೆ. ಆದರೆ ಭಾರತದಲ್ಲಿ ದೇಶಾದ್ಯಂತ ಸಮಾನವಾಗಿ ಅನ್ವಯವಾಗುವ ಐಪಿಸಿ, ಸಿಪಿಸಿ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್‌ಗಳು ಇದ್ದರೂ ಸಹ, ಅವುಗಳ ಅನುಷ್ಠಾನದ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ.

* ಕಾನೂನು ವಿರೋಧಿ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆಯ ಕಲಂ 43ಎ ಅಡಿ ಎನ್‌ಸಿಟಿಸಿಯ ಅನುಷ್ಠಾನ ಘಟಕದ ಅಧಿಕಾರಿಗಳಿಗೆ ವ್ಯಕ್ತಿಗಳ ಬಂಧನ, ಶೋಧನೆ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲು ನೀಡಲು ಉದ್ದೇಶಿಸಿರುವ ಅಧಿಕಾರ, ರಾಜ್ಯ ಸರ್ಕಾರಗಳ ಅಧಿಕಾರಕ್ಕೆ ಚ್ಯುತಿ ತರುವುದರಿಂದ, ಈ ಕ್ರಮವನ್ನು ನಾವು ವಿರೋಧಿಸಿದ್ದೇವೆ.

* ಕೆಲವು ಸನ್ನಿವೇಶಗಳಲ್ಲಿ ನೇರವಾಗಿ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಎನ್‌ಸಿಟಿಸಿಯ ನಿರ್ದೇಶಕರೂ ಒಳಗೊಂಡಂತೆ ಇತರೆ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿಯೂ ಅಧಿಕಾರದ ದುರುಪಯೋಗ ತಡೆಯಲು ಕೆಲ ಮಾರ್ಪಾಡು ಮಾಡಲು ನಾವು ಆಗ್ರಹಿಸಿದ್ದೇವೆ.

* ಯುಎ (ಪಿ) ಕಾಯ್ದೆಯ ಸೆಕ್ಷನ್ 43ಬಿ ಅಡಿಯ ಸಬ್ ಸೆಕ್ಷನ್ 3ರ ಪ್ರಕಾರ, ಬಂಧಿಸಲಾದ ಆರೋಪಿಗಳನ್ನು ಸ್ಥಳೀಯ ಪೊಲೀಸ್ ಠಾಣೆಯ ಸುಪರ್ದಿಗೆ ಕೊಟ್ಟ ನಂತರ ಮುಂದಿನ ಕ್ರಮ ಕೈಗೊಳ್ಳುವ ಹೊಣೆಗಾರಿಕೆ ಆ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರವರಿಗೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಎನ್‌ಸಿಟಿಸಿ ಅಧಿಕಾರಿಗಳು ತೆಗೆದುಕೊಂಡ ನಿಲುವನ್ನು ಸ್ವತಂತ್ರವಾಗಿ ಪರಿಶೀಲಿಸುವ ಅಧಿಕಾರ ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಇರುವುದಿಲ್ಲ.

* ಎನ್‌ಸಿಟಿಸಿಯ ಮನವಿ ಮೇರೆಗೆ ಎನ್‌ಎಸ್‌ಜಿ ಅಥವಾ ಇತರೆ ಕೇಂದ್ರ ಪೊಲೀಸ್ ಪಡೆಗಳು, ರಾಜ್ಯ ಪೊಲೀಸರು ಸಹಕಾರ ನೀಡದಿದ್ದಲ್ಲಿ, ಬಂಧಿಸಲು, ಶೋಧನೆ ಮಾಡಲು ಹಾಗೂ ವಶಪಡಿಸಿಕೊಳ್ಳಲು ಎನ್‌ಸಿಟಿಸಿಗೆ ನೆರವಾಗಬಹುದು. ಈ ಎಲ್ಲಾ ಕ್ರಮ ರಾಜ್ಯ ಪೊಲೀಸ್ ಅಧಿಕಾರಿಗಳ ಮೇಲೆ ನಕರಾತ್ಮಕ ಪ್ರಭಾವ ಬೀರಲಿವೆ.

* ಎನ್‌ಸಿಟಿಸಿ ಹಸ್ತಾಂತರಿಸಿದ ಅಪರಾಧಿಗಳನ್ನು ರಾಜ್ಯ ಪೊಲೀಸರು ಪ್ರಾಸಿಕ್ಯೂಟ್ ಮಾಡಬೇಕಾಗುತ್ತದೆ. ಒಂದು ವೇಳೆ ಪ್ರಕರಣ ವಿಫಲವಾದಲ್ಲಿ ಎನ್‌ಸಿಟಿಸಿ ಅಧಿಕಾರಿಗಳು ರಾಜ್ಯದ ಪೊಲೀಸರ ಮೇಲೆ ಗೂಬೆ ಕೂರಿಸಬಹುದು. ರಾಜಕೀಯವಾಗಿಯೂ ಕೇಂದ್ರ, ರಾಜ್ಯ ಸರ್ಕಾರಗಳನ್ನು ಅಗತ್ಯ ಬೆಂಬಲ ನೀಡಲಿಲ್ಲವೆಂದು ದೂಷಿಸಬಹುದು. ಎನ್‌ಸಿಟಿಸಿ ಆದೇಶವನ್ನು ಹೊರಡಿಸುವ ಮೊದಲು ಈ ಎಲ್ಲಾ ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣಿಸಿಲ್ಲ.

* ಯುಎ(ಪಿ)ಎ ಅಡಿ ಎನ್‌ಸಿಟಿಸಿಯನ್ನು ಡೆಸಿಗ್‌ನೇಟೆಡ್ ಅಥಾರಿಟಿ ಎಂದು ಹೆಸರಿಸಲು ಉದ್ದೇಶಿಸಲಾಗಿದೆ. ಹಾಗೆಯೇ ಎಸ್‌ಐಬಿ (ರಾಜ್ಯ ಗುಪ್ತ ವಾರ್ತೆ) ಅಥವಾ ಸಬ್ಸಿಡಿಯರಿ ಮಲ್ಟಿ ಏಜೆನ್ಸಿ ಸೆಂಟರ್‌ನ ಮುಖ್ಯಸ್ಥರನ್ನು ರಾಜ್ಯ ಮಟ್ಟದಲ್ಲಿ ನೇಮಿಸುವ ಪ್ರಸ್ತಾವನೆ ಇದೆ. ಕೇಂದ್ರೀಯ ಇಂಟೆಲಿಜೆನ್ಸ್ ಬ್ಯೂರೋನ ರಾಜ್ಯ ಮಟ್ಟದ ಮುಖ್ಯಸ್ಥರು ಎಸ್‌ಐಬಿ ಅಥವಾ ಸಬ್ಸಿಡಿಯರಿ ಮಲ್ಟಿ ಏಜೆನ್ಸಿ ಸೆಂಟರ್‌ಗಳ ಮುಖ್ಯಸ್ಥರಾಗಿರುತ್ತಾರೆ. ಎನ್‌ಸಿಟಿಸಿ ಕೌನ್ಸಿಲ್‌ನಲ್ಲಿ ರಾಜ್ಯದ ಡಿಜಿಪಿ ಅಥವಾ ಎಟಿಎಸ್‌ನ ಮುಖ್ಯಸ್ಥರು ಸದಸ್ಯರಾಗಿರುತ್ತಾರೆ. ಹೀಗಾಗಿ, ಸ್ಥಾಯಿ ಸಮಿತಿಯಲ್ಲಿ ಕೇಂದ್ರಿಯ ಸಂಸ್ಥೆಗಳು ಮೂವರು ಸದಸ್ಯರನ್ನು ಹೊಂದಿದ್ದರೆ, ರಾಜ್ಯದಿಂದ ಒಬ್ಬರೇ ಸದಸ್ಯರು ಪ್ರತಿನಿಧಿಯಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ, ಯಾವುದೇ ಮುಖ್ಯ ವಿಷಯದ ಬಗ್ಗೆ, ರಾಜ್ಯದ ಪ್ರತಿನಿಧಿಯ ಅಭಿಪ್ರಾಯವನ್ನು ತಿರಸ್ಕರಿಸಲೂ ಅವಕಾಶವಿರುತ್ತದೆ. ಈ ರೀತಿಯ ಎಲ್ಲಾ ಅತಂಕಗಳನ್ನು ಗಣನೆಗೆ ತೆಗೆದುಕೊಂಡು, ರಾಜ್ಯ ಸರ್ಕಾರದ ಹಕ್ಕುಗಳನ್ನು ಮೊಟಕುಗೊಳಿಸಲು ಎನ್‌ಸಿಟಿಸಿಯಲ್ಲಿ ಇರುವ ಅವಕಾಶಗಳನ್ನು ಸೂಕ್ತವಾಗಿ ಪರಿಷ್ಕರಿಸಿದ ನಂತರವೇ ಎನ್‌ಸಿಟಿಸಿ ಪ್ರಸ್ತಾವನೆಯನ್ನು ಮುಂದುವರಿಸಬಹುದೆಂದು ನಾವು ಕೇಂದ್ರ ಸರ್ಕಾರಕ್ಕೆ ಆಗ್ರಹಮಾಡಿದ್ದೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+