ಆಕ್ಸಿಡೆಂಟ್ ಮಾಡಿ ಶಾಸಕರು ಓಡಿದ್ರು: ಪ್ರತ್ಯಕ್ಷದರ್ಶಿ

ಶಾಸಕ ಸುರೇಶ್ ಗೌಡ ಅವರ ಕಾರು ಅಪಘಾತ ಪ್ರಕರಣ ದುರಂತ ಅಂತ್ಯ ಕಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ತಿಮ್ಮ ಹನುಮಯ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸುರೇಶ್ ಅವರ ಕಾರು ಚಾಲಕ ದಯಾನಂದ್ ಎಂಬುವವರನ್ನು ನೆಲಮಂಗಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶಾಸಕ ಸುರೇಶ್ ಅವರು ಯಡಿಯುರಪ್ಪ ಅವರ ಜೊತೆ ಶನಿದೇವರ ದರ್ಶನಕ್ಕೆ ಹೋಗಲು ತೆರಳುತ್ತಿದ್ದರು ಎನ್ನಲಾಗಿದೆ.
ನೆಲಮಂಗಲ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಎಸ್ ಆರ್ ಎಲ್ ಸಮುದಾಯ ಭವನದಲ್ಲಿ ನಡೆದಿದ್ದ ಮದುವೆಗೆ ಹೊರಟ್ಟಿದ್ದ ತಿಮ್ಮ ಹನುಮಯ್ಯ ಅವರು ಭಾನುವಾರ(ಏ.29) ಬೆಳಗ್ಗೆ ರಸ್ತೆ ದಾಟುವಾಗ ಅಪಘಾತ ಸಂಭವಿಸಿದೆ. ಶಾಸಕರ ಪರವಾಗಿ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು ಹನುಮಯ್ಯ ಅವರನ್ನು ಆಸ್ಪತ್ರೆ ಸೇರಿಸಿದ್ದಾರೆ.
'ಮೃತ ಹನುಮಯ್ಯ ಅವರಿಗೆ ಪತ್ನಿ, ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮಕ್ಕಳಿಗೆ ಮದುವೆಯಾಗಿದೆ. ಘಟನೆ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕೆ ಓಡಿ ಬಂದೆವು. ಶಾಸಕರು ಬೇರೆ ಕಾರಿನಲ್ಲಿ ಹೋಗೋದು ಕಾಣಿಸಿತು. ತಕ್ಷಣವೇ ಹರ್ಷ ಆಸ್ಪತ್ರೆಗೆ ಕರೆದೊಯ್ದೆವು.
ಆದರೆ, ತಲೆಗೆ ಪೆಟ್ಟು ಬಿದ್ದಿದ್ದರಿಂದ ರಕ್ತ ಸಕತ್ ಹೋಗಿತ್ತು. ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋದ್ವಿ. ಆದರೆ, ಹನುಮಯ್ಯ ಉಳಿಯಲಿಲ್ಲ. ಇಲ್ಲಿಂದ ನಿಮ್ಹಾನ್ಸ್ ಗೆ ಹೋಗೋದಕ್ಕೂ ದೂರಾ ಆಗುತ್ತಾ ಇತ್ತು' ಎಂದು ಹನುಮಯ್ಯ ಅವರ ಸಂಬಂಧಿಕರಾದ ಬಲರಾಮಯ್ಯ ಗೋಳು ತೋಡಿಕೊಂಡಿದ್ದಾರೆ. ನಾನೇನು ಓಡಿ ಹೋಗಿಲ್ಲ. ಸಂಜೆ ವೇಳೆಗೆ ಮೃತರ ಕುಟುಂಬವನ್ನು ಭೇಟಿ ಮಾಡುವುದಾಗಿ ಶಾಸಕ ಸುರೇಶ್ ಗೌಡ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications