ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ : ಕೋಲಾರದ ಮಹಿಳೆಯರಿಂದ ಡಿವಿಎಸ್ ದಿಗ್ಬಂಧನ

By Prasad
|
Google Oneindia Kannada News

Kolar women gherao Sadananda Gowda
ಕೋಲಾರ, ಏ. 21 : ಜಿಲ್ಲೆಯಲ್ಲಿ ರೈತರನ್ನು ಮತ್ತು ಬಡವರನ್ನು ಬಸವಳಿಯುವಂತೆ ಮಾಡಿರುವ ಭೀಕರ ಬರ ಪರಿಸ್ಥಿತಿಯನ್ನು ಖುದ್ದಾಗಿ ಅಧ್ಯಯನ ಮಾಡಲು ಬಂದಿದ್ದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರನ್ನು ರೈತರು ಮತ್ತು ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟಿಸಿದರು ಮತ್ತು ಕುಡಿಯುವ ನೀರು ಒದಗಿಸುವಂತೆ ದಿಗ್ಬಂಧನ ಹಾಕಿದರು.

ಬೆಳಗ್ಗೆ 10 ಗಂಟೆ ಸುಮಾರಿಗೆ ಕೇಂದ್ರ ರೇಲ್ವೆ ಖಾತೆ ಸಹಾಯಕ ಸಚಿವ, ಕೋಲಾರದ ಸಂಸದ ಕೆಎಚ್ ಮುನಿಯಪ್ಪ ಮತ್ತು ಕೋಲಾರದ ವಿಧಾನಸಭೆ ಸದಸ್ಯ ವರ್ತೂರು ಪ್ರಕಾಶ್ ಅವರೊಡನೆ ಛತ್ರಕೋಡಿಹಳ್ಳಿಗೆ ಸದಾನಂದ ಗೌಡರು ಬಂದಾಗ, ರಣರಣ ಬಿಸಿಲಿನಲ್ಲಿ ಕಾದಿದ್ದ ಜನರ ಸಹನೆಯ ಅಣೆಕಟ್ಟೆಯೊಡೆದಿತ್ತು. ಮಂತ್ರಿಗಳನ್ನು ಘೇರಾವೋ ಹಾಕಿದರು, ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿಕೊಂಡರು.

ಕೆಲ ದಿನಗಳ ಹಿಂದೆ ಬಿಜೆಪಿ ಸರಕಾರದ ಕೆಲ ಸಚಿವರು ಬರದ ಅಧ್ಯಯನಕ್ಕೆ ಬಂದು, ಸೂಕ್ತವಾಗಿ ಜನರೊಂದಿಗೆ ಸ್ಪಂದಿಸದೆ ಹಾಗೆ ಹೊರಟುಹೋಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಗ್ರಾಮಸ್ಥರು ಪ್ರತಿಭಟಿಸಿದರೂ ನಗುಮೊಗದಿಂದಲೇ ಎಲ್ಲರ ಅಹವಾಲುಗಳನ್ನು ಸದಾನಂದ ಗೌಡರು ಆಲಿಸಿದರು. ಅನೇಕ ಗ್ರಾಮಗಳಿಗೆ ಸ್ವತಃ ಭೇಟಿ ನೀಡಿ ಸಮಸ್ಯೆಗಳ ಮಾಹಿತಿಯನ್ನು ಪಡೆದರು. ಜಿಲ್ಲಾ ಪಂಚಾಯತ್ ಅಧಿಕಾರಿಗಳೆ ಸಮಸ್ಯೆ ಪರಿಹಾರಕ್ಕೆ ಸೂಚನೆಗಳನ್ನು ನೀಡಿದರು.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ಜೂನ್ ತಿಂಗಳಲ್ಲಿ ಆರಂಭವಾಗಲಿದೆ. ಅದು ಮುಗಿಯುವುದಕ್ಕೆ ಒಂದೆರಡು ವರ್ಷಗಳಾದರೂ ಬೇಕು. ಅಲ್ಲಿಯವರೆಗೆ ಜನ ಸಹಿಸಿಕೊಂಡಿರಲೇಬೇಕು, ಅನ್ಯ ಮಾರ್ಗವೇ ಇಲ್ಲ ಎಂದು ವಸ್ತುಸ್ಥಿತಿಯನ್ನು ಸದಾನಂದ ಗೌಡರು ಹಳ್ಳಿಗರ ಮುಂದೆ ತೆರೆದಿಟ್ಟರು.

ಬರ ಪರಿಸ್ಥಿತಿಯ ಅರಿವು ಸರಕಾರಕ್ಕಿದೆ. ಈಗಾಗಲೆ, ಸಂಕಟದಲ್ಲಿರುವ ರೈತರಿಂದ ಬಡ್ಡಿ ವಸೂಲಿ ಕೈಬಿಡಬೇಕೆಂದು ಸೂಚಿಸಲಾಗಿದೆ. ರೈತರ ಸಾಲಮನ್ನಾ ಮಾಡಲು ಕೇಂದ್ರಕ್ಕೂ ಮನವಿ ಮಾಡಲಿದ್ದೇವೆ. ಮೇವಿನ ಕೊರತೆ ನೀಗಿಸಲು ಸರ್ವರೀತಿಯ ಪ್ರಯತ್ನ ಮಾಡುತ್ತೇವೆ. ರೇಷ್ಮೆ ಬೆಳೆಗಾರರ ಸಮಸ್ಯೆಗಳಿಗೂ ಪರಿಹಾರ ಕಂಡುಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಆದರೆ, ಹೀಗೆ ಮಾಡೇಮಾಡುತ್ತೇವೆ ಎಂದು ಭರವಸೆ ನೀಡುವುದಿಲ್ಲ ಎಂದು ಸದಾನಂದ ಗೌಡರು ಜನರಿಗೆ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

24 ಜಿಲ್ಲೆಗಳಲ್ಲಿ ಬರ : ರಾಜ್ಯದ 24 ಜಿಲ್ಲೆಗಳಲ್ಲಿ 123 ತಾಲೂಕುಗಳು ಬರಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿದೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಬರ ಪರಿಹಾರಕ್ಕಾಗಿ ಎಲ್ಲ ಇಲಾಖೆಗಳು ಸಮರೋಪಾದಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆದೇಶಿಸಿದೆ. ಹಾಗೆಯೆ, ಯಾವುದೇ ಸಚಿವರು ಮತ್ತು ಅಧಿಕಾರಿಗಳು ವಿದೇಶ ಪ್ರವಾಸ ಕೈಗೊಳ್ಳಬಾರದೆಂದು ಸದಾನಂದ ಗೌಡರು ಏ.19ರಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

English summary
People crying in dry Kolar : Chief minister DV Sadananda Gowda gheraoed by women with empty pot and farmers in Kolar district when he came to study drought situation in the district. He said, permanent drinking water will be provided in one or two years and proper action will be taken to tackle drought situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X