ಬಹಿಷ್ಕಾರ ವಾಪಸ್ : ಮೌಲ್ಯಮಾಪನಕ್ಕೆ ಶಿಕ್ಷಕರು ಹಾಜರ್

ಶಾಸಕರ ಭವನದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಶಿಕ್ಷಕರ ಸಂಘದ ಕೋರ್ ಕಮಿಟಿ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಶಿಕ್ಷಕರು ತಳೆದಿದ್ದಾರೆ. ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ 37 ಕೇಂದ್ರಗಳಲ್ಲಿ ಮೌಲ್ಯಮಾಪನಕ್ಕೆ ಶಿಕ್ಷಕರು ಹಾಜರಾಗಲಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ಎಸ್ ದೊರೆಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಕರ ಕೋರ್ ಕಮಿಟಿ ಸಭೆ ನಡೆದಿದೆ.
ಮೌಲ್ಯಮಾಪನ ಬಹಿಷ್ಕಾರದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಅವರನ್ನು ಸಂಕಷ್ಟಕ್ಕೀಡು ಮಾಡಬಾರದು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಕೋರ್ ಕಮಿಟಿ ಹೇಳಿದೆ. ಬಹಿಷ್ಕಾರ ಹಿಂತೆಗೆಯಲು ಯಾವುದೇ ಷರತ್ತುಗಳನ್ನು ಸರಕಾರದ ಮುಂದಿಟ್ಟಿಲ್ಲ. ಆದರೆ, ಸರಕಾರ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಭರವಸೆಯಿಂದ ಮುಷ್ಕರ ಹಿಂತೆಗೆದುಕೊಳ್ಳಲಾಗಿದೆ ಎಂದು ದೊರೆಸ್ವಾಮಿ ತಿಳಿಸಿದ್ದಾರೆ.
ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಅನಿವಾಸಿ ವೇದಿಕೆಯ ಉಪಾಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್, ಎಚ್ ಎಸ್ ದೊರೆಸ್ವಾಮಿ ಮತ್ತು ಶಿಕ್ಷಕರು ಭಾಗವಹಿಸಿದ್ದರು. ಬ್ಲಾಕ್‌ಮೇಲ್ ಮಾಡಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಸಲ್ಲ ಮತ್ತು ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯದೊಡನೆ ಆಟವಾಡುವುದು ಹಿತವಲ್ಲ ಎಂಬ ಕಿವಿಮಾತಿಗೆ ಶಿಕ್ಷಕರು ಬಗ್ಗಿದ್ದಾರೆ.
ಮೌಲ್ಯಮಾಪನವನ್ನು ಶಿಕ್ಷಕರು ಬಹಿಷ್ಕರಿಸದಿದ್ದರೆ ಏ.19ರೊಳಗೆ ಮೌಲ್ಯಮಾಪನ ಮುಗಿದು, ಏ. 26ರ ಹೊತ್ತಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬರುವ ಸಂಭವನೀಯತೆಯಿತ್ತು. ಮೌಲ್ಯಮಾಪನ ತಡವಾಗಿದ್ದರಿಂದ ಮೇ ಮೊದಲ ವಾರದಲ್ಲಿ ಫಲಿತಾಂಶ ಬರುವ ಸಂಭವನೀಯತೆಯಿದೆ. ಮೌಲ್ಯಮಾಪನಕ್ಕೆ ಶಿಕ್ಷಕರು ಹಾಜರಾಗುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಹೆಪ್ಪುಗಟ್ಟಿದ್ದ ಆತಂಕದ ಕಾರ್ಮೋಡ ಕರಗಿದಂತಾಗಿದೆ.












Click it and Unblock the Notifications