ನೀರಿಲ್ಲ ಮೇವಿಲ್ಲ, ಜಾನುವಾರು ಆಂಧ್ರ ಕಸಾಯಿ ಪಾಲು

ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೇಸಿಗೆ ಕಾವು ಹೆಚ್ಚಾಗುತ್ತಿರುವ ಮಧ್ಯೆ ಭೀಕರ ಬರ, ಕೈಹಿಡಿಯದ ಕೃಷಿ, ಮೇವಿನ ಕೊರತೆಯಿಂದ ಜಿಲ್ಲೆಯ ರೈತರು ತಮ್ಮ ಜಾನುವಾರುಗಳನ್ನು, ಪ್ರತಿ ಮಂಗಳವಾರ ಬಸವೇಶ್ವರ ಗಂಜ್ (ಎಪಿಎಂಸಿ ಯಾರ್ಡ್)ನಲ್ಲಿ ನಡೆಯುವ ಜಾನುವಾರುಗಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಈ ಗೋವುಗಳನ್ನು ಪಕ್ಕದ ಆಂಧ್ರಪ್ರದೇಶದ ದಲ್ಲಾಳಿಗಳ ಮುಖಾಂತರ ನಾರಾಯಣಪೇಟ, ಮೆಹಬೂಬನಗರ ಹಾಗೂ ಹೈದ್ರಾಬಾದ್ ಕಸಾಯಿ ಖಾನೆಗೆ ಲಾರಿಗಳ ಮುಖಾಂತರ ಸಾಗಿಸುವುದು ಇಲ್ಲಿ ಮಾಮೂಲಾಗಿದೆ. ಸಂಘಟನೆಗಳಿಗೆ ಈ ವಿಷಯ ಗೊತ್ತಿದ್ದರೂ ಮೌನ ವಹಿಸಿವೆ. ಯಾಕೆ ಎಂಬುದು ತಿಳಿದು ಬಂದಿಲ್ಲ. ಹಾಗೂ ಜಿಲ್ಲಾಢಳಿತ ಕೂಡ ಮೌನಕ್ಕೆ ಶರಣಾಗಿದೆ.
ರಾಜ್ಯದ ಬರ ಪೀಡಿತ ಪ್ರದೇಶದಲ್ಲಿ ಯಾದಗಿರಿ ಜಿಲ್ಲೆಯೂ ಒಂದಾಗಿದ್ದು, ಬರ ಪರಿಹಾರಕ್ಕಾಗಿ 8 ಕೋಟಿ ರು. ಹಣ ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿಗಳ ಲೆಕ್ಕದಲ್ಲಿ ಬರಪರಿಹಾರ ಕಾಮಗಾರಿ ತೀವ್ರಗತಿಯಲ್ಲಿ ನಡೆದಿದೆ. ಆದರೆ ಜಾನುವಾರುಗಳು ಮೇವು, ನೀರಿಲ್ಲದೆ ಕಸಾಯಿಖಾನೆಗೆ ಸಾಗಿಸುತ್ತಿರುವುದು ಹದಗೆಟ್ಟ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಎಪಿಎಂಸಿಗೆ ನೀಡಬೇಕಾದ ಯಾವುದೇ ಶುಲ್ಕ ನೀಡುವುದಿಲ್ಲ. ವ್ಯವಹಾರ ಮಾಡಿದ್ದು ಅನಧಿಕೃತ ಎಂಬ ಸತ್ಯಾಂಶವನ್ನೂ ಇದೆ. ಅದ್ಯಾವ ಕೈಗಳು ಕೆಲಸ ಮಾಡುತ್ತಿವೆ ಎನ್ನುವುದು ಇಲ್ಲಿ ನಿಗೂಢವಾಗಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಸಂತೆಗೆ ಬರುವ ಕಸಾಯಿ ಖಾನೆ ದಲ್ಲಾಳಿಗಳನ್ನು ನಿರ್ಬಂಧಿಸಬೇಕು, ಗಡಿಭಾಗದಲ್ಲಿ ಅಗತ್ಯ ತನಿಖಾ ಠಾಣೆಗಳನ್ನು ಸ್ಥಾಪಿಸುವ ಮೂಲಕ ರೈತರ ಜಾನುವಾರು ಹಾಗೂ ಮೇವು ಮಾರಾಟ ತಡೆಯಬೇಕು ಮತ್ತು ಗೋಶಾಲೆ ಆರಂಭಿಸಬೇಕೆಂದು ಗೋವು ಪ್ರೇಮಿಗಳು ಗೋಗರೆಯುತ್ತಿದ್ದಾರೆ.












Click it and Unblock the Notifications