ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮತ್ತೆ ಅಧಿಕಾರಕ್ಕೆ ಏಕೆ ಬರಬೇಕು?

By * ಮಾಲತಿ
|
Google Oneindia Kannada News

Why should Yeddyurappa be re-instated as CM of Karnataka?
ಬಿಜೆಪಿಯಲ್ಲಿನ ಆಂತರಿಕ ಯುದ್ಧದಿಂದಾಗಿ ಆಡಳಿತ ದಾರಿತಪ್ಪಿದೆ, ಅಭಿವೃದ್ಧಿ ಮಕಾಡೆ ಮಲಗಿದೆ. ಬಿಜೆಪಿಯ ಕಲಹದ ಲಾಭ ಪಡೆಯಲು ವಿರೋಧ ಪಕ್ಷಗಳು ಸಜ್ಜಾಗಿವೆ. ಆಡಳಿತ ಸರಾಗವಾಗಿ ಸಾಗುವುದು ಅವರಿಗೂ ಬೇಕಿಲ್ಲ, ಇವರಿಗೂ ಬೇಕಿಲ್ಲ. ಬೇಕಿರುವುದು ಅಧಿಕಾರ ಮಾತ್ರ. ಸಾರ್ವಜನಿಕರು ಇಡೀ ರಾಜಕಾರಣಿಗಳ ಸಮೂಹವನ್ನು ಅಸಹ್ಯದಿಂದ ನೋಡುತ್ತಿದ್ದಾರೆ. ರಾಜ್ಯಕ್ಕೆ ಒಬ್ಬ ದಕ್ಷ ರಾಜನಿಲ್ಲದಿದ್ದರೆ ಅರಾಜಕತೆ ಕಟ್ಟಿಟ್ಟ ಬುತ್ತಿ. ಕುರ್ಚಿ ಉಳಿಸಿಕೊಳ್ಳಲು ಸದಾನಂದ ಗೌಡ ಹೋರಾಡುತ್ತಿದ್ದರೆ, ಮರಳಿ ಪಡೆಯಲು ಯಡಿಯೂರಪ್ಪ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮುಖ್ಯಮಂತ್ರಿಯ ಬದಲಾವಣೆ ಆಗಬೇಕಾ? ಬೇಡವಾ? ಯಡಿಯೂರಪ್ಪ ಮತ್ತೆ ರಾಜ್ಯದ ಅತ್ಯುನ್ನತ ಹುದ್ದೆಗೆ ಮರಳಿಬರಬೇಕೆಂಬ ವಾದ ಇಲ್ಲಿದೆ.

ಕರ್ನಾಟಕದಲ್ಲಿ ಹಣ ಬಲದಿಂದಾಗಲಿ, ಜನ ಬಲದಿಂದಾಗಲಿ, ಮನೋ ಬಲದಿಂದಾಗಲಿ ಅಧಿಕಾರವನ್ನು ಪಡೆಯತಕ್ಕಂಥ, ಪ್ರವಾಹದ ವಿರುದ್ಧ ಈಜುವಂಥ, ಛಲದಂಕಮಲ್ಲನಂತೆ ಹೋರಾಡುವ ಶಕ್ತಿಯುಳ್ಳ ರಾಜಕಾರಣಿ ಯಾರಿದ್ದಾರೆ? ಬಿಜೆಪಿಯಾಗಲಿ, ಕಾಂಗ್ರೆಸ್ಸಾಗಲಿ, ಜೆಡಿಎಸ್ಸಾಗಲಿ... ಯಾವುದೇ ಪಕ್ಷದ ಎದೆಯನ್ನು ಸೀಳಿದರೂ ಯಡಿಯೂರಪ್ಪನವರನ್ನು ಹೊರತುಪಡಿಸಿದರೆ ಇನ್ನೊಬ್ಬ ರಾಜಕಾರಣಿ ಸಿಗಲಿಕ್ಕಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದ ಜನಕ್ಕೆ ಯಡಿಯೂರಪ್ಪ ಬೇಕಾಗಿಲ್ಲದಿದ್ದರೂ, ಆಂತರಿಕ ಜಗಳ, ಭಿನ್ನಮತ, ಉಪ ಚುನಾವಣೆಗಳಲ್ಲಿ ಸತತ ಸೋಲು ಕಾಣುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಯಡಿಯೂರಪ್ಪ ಖಂಡಿತ ಬೇಕಾಗಿದೆ. ಯಡಿಯೂರಪ್ಪನವರ ನಾಯಕತ್ವವಿಲ್ಲದೆ ಇತ್ತೀಚಿನ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಕಂಡೇ ಇಲ್ಲ. ಅಲ್ಲದೆ, ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಿರುವ ಬಿಜೆಪಿ ಹೈಕಮಾಂಡಿಗೆ, ಒಳಜಗಳಗಳಿಂದಾಗಿ ಅಧಿಕಾರದ ಗದ್ದುಗೆಯನ್ನು ಕಳೆದುಕೊಳ್ಳುವುದು ಖಂಡಿತ ಬೇಕಾಗಿಲ್ಲ.

ಸ್ವಜನ ಪಕ್ಷಪಾತ, ದುರಂಕಾರ, ಕೌಟುಂಬಿಕ ಪ್ರೇಮ, ಭ್ರಷ್ಟ ಮನಸ್ಸನ್ನು ಬದಿಗಿಟ್ಟು, ಪಕ್ಷದಲ್ಲಿ ಎಲ್ಲರನ್ನೂ ಸೇರಿಸಿಕೊಂಡು ದುಡಿಯುವ ಜಾಣ್ಮೆ ಮತ್ತು ಅಭಿವೃದ್ಧಿಯತ್ತ ಗಮನ ನೀಡುವ ತಾಳ್ಮೆಯನ್ನು ಯಡಿಯೂರಪ್ಪ ಕರಗತ ಮಾಡಿಕೊಂಡರೆ ಇಂದಿಗೂ ಅವರು ಸೂಕ್ತ ನಾಯಕರೆ. ಹೋಗಲಿ, ಅವರಿಗೆ ಪರ್ಯಾಯವಾಗಿ ಯಾವ ನಾಯಕರಿದ್ದಾರೆ ಬಿಜೆಪಿಯಲ್ಲಿ? ಸದಾನಂದ ಗೌಡ, ಈಶ್ವರಪ್ಪನವರಿಗೆ ಎಷ್ಟು ಜನ ಬೆಂಬಲಿಗರಿದ್ದಾರೆ? ಅನಂತ್ ಕುಮಾರ್ ರಾಜ್ಯದಲ್ಲಿ ಎಷ್ಟು ಪ್ರಭಾವ ಉಳಿಸಿಕೊಂಡಿದ್ದಾರೆ? ಶೆಟ್ಟರ್ ಅವರ ಹಿಂಬದಿಗೆ ಯಾರಾದರೂ ಇದ್ದಾರಾ? ಸುರೇಶ್ ಕುಮಾರ್ ಅವರನ್ನು ನಾಯಕನನ್ನಾಗಿ ಸ್ವೀಕರಿಸಲು ಎಷ್ಟು ಶಾಸಕರು ತಯಾರಿದ್ದಾರೆ?

ಬಿಜೆಪಿ ಬೇಡವಾದರೆ ವಿರೋಧ ಪಕ್ಷದಲ್ಲಿಯಾದರೂ ಯಾವ ನಾಯಕನಿದ್ದಾನೆ? ಕುಮಾರಸ್ವಾಮಿ, ಸಿದ್ದರಾಮಯ್ಯ, ಎಸ್ಎಂ ಕೃಷ್ಣ, ಆರ್ ವಿ ದೇಶಪಾಂಡೆ, ಪಿಜಿಆರ್ ಸಿಂಧ್ಯಾ, ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್... ಪಟ್ಟಿ ಬೆಳೆಯುತ್ತದೆಯೇ ಹೊರತು, ಯಡಿಯೂರಪ್ಪನವರ ಎತ್ತರಕ್ಕೆ ನಿಲ್ಲುವ ಒಬ್ಬನೂ ಕಾಣುವುದಿಲ್ಲ. ಇನ್ನು, ಸದಾನಂದ ಗೌಡರನ್ನು ಕೆಳಗಿಳಿಸಲು ಸೂಕ್ತವಾದ ಕಾರಣವಾದರೂ ಏನು ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಬಿಜೆಪಿ ಹೈಕಮಾಂಡೇ ಉತ್ತರ ನೀಡಬೇಕು. ಉತ್ತರ ನೀಡುವ ತಾಕತ್ತು ಇಲ್ಲದಿದ್ದರೆ ಪ್ರಶ್ನೆ ಹುಟ್ಟುಹಾಕುವಂತಹ ಸಂದರ್ಭ ಸೃಷ್ಟಿಸಲೂಬಾರದಿತ್ತು.

ಪ್ರಮುಖವಾಗಿ ಅಕ್ರಮ ಗಣಿಗಾರಿಕೆಯಲ್ಲಿ ಅಂಟಿದ ಕಪ್ಪು ಮಸಿ ಅವರ ಸಫಾರಿಯಿಂದ ಅಳಿದುಹೋಗಿದೆ. ಇನ್ನುಳಿದ ಏಳೆಂಟು ಪ್ರಕರಣಗಳು ಖಾಸಗಿ ದೂರುಗಳು. ಅವನ್ನು ಯಾರು ಬೇಕಾದರೂ ಸಲ್ಲಿಸಬಹುದು. ಅಕ್ರಮ ಗಣಿಗಾರಿಕೆಯಿಂದ ಮುಕ್ತರಾದರೆ ಅಧಿಕಾರ ಮರಳಿ ನೀಡುವುದಾಗಿ ಹೈಕಮಾಂಡೇ ವಾಗ್ದಾನ ನೀಡಿತ್ತು. ಆದರೆ, ಈಗ ಹಿಂಜರಿಯುತ್ತಿರುವುದೇಕೆ ಎಂಬುದು ಯಡಿಯೂರಪ್ಪನವರ ಬೆಂಬಲಿಗರ ಪ್ರಶ್ನೆ. ಇದಕ್ಕೆ ಸೂಕ್ತ ಉತ್ತರ ಯಾರೂ ನೀಡುತ್ತಿಲ್ಲ.

English summary
Why should Yeddyurappa be re-instated as CM of Karnataka? Now DV Sadananda Gowda is at the helm of Karnataka govt, why should he be dislodged? Here are few reasons why BSY should be again given a chance to rule Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X