ವಕೀಲರ ಪುಂಡಾಟಿಕೆ : ಸಿಬಿಐ ತನಿಖೆಗೆ ಪತ್ರಕರ್ತರ ಒತ್ತಾಯ

ನ್ಯಾಯಾಂಗ ತನಿಖೆ ನಡೆಸಲಾದ ಪ್ರಕರಣಗಳ ಇತಿಹಾಸ ಕೆಣಕಿದರೆ ನಮಗೆ ನ್ಯಾಯ ಸಿಗುವುದು ಖಂಡಿತ ಸಾಧ್ಯವಿಲ್ಲ. ಮತಿಗೇಡಿ ಸರಕಾರಕ್ಕೆ ನಮಗೆ ನ್ಯಾಯ ದೊರಕಿಸಿಕೊಡುವುದು ಬೇಕಾಗೂ ಇಲ್ಲ. ಸಿಬಿಐ ತನಿಖೆ ನಡೆಸಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಬೆಂಗಳೂರು ವರದಿಗಾರರ ಕೂಟ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ವೃತ್ತಿನಿರತ ಪತ್ರಕರ್ತರ ಒಕ್ಕೂಟ, ಫೋಟೋ ಪತ್ರಕರ್ತರ ಒಕ್ಕೂಟ, ವಿಡಿಯೋ ಜರ್ನಲಿಸ್ಟ್ ಸಂಘದ ಸದಸ್ಯರು, ಪ್ರೆಸ್ ಕ್ಲಬ್ ಸದಸ್ಯರು, ಪತ್ರಿಕಾಲಯಗಳಲ್ಲಿ ಕೆಲಸ ಮಾಡುವ ಇತರ ಸಿಬ್ಬಂದಿಗಳು ಕೂಡ ಭಾಗವಹಿಸಿ, ಒಗ್ಗಟ್ಟು ಮತ್ತು ಬಲವನ್ನು ಪ್ರದರ್ಶಿಸಿದರು.
ಗೂಂಡಾಗಿರಿ ಮಾಡಿದ ವಕೀಲರ ವಿರುದ್ಧ, ಹೇಡಿಯಂತೆ ವರ್ತಿಸುತ್ತಿದೆಯೆಂದು ಸರಕಾರದ ವಿರುದ್ಧ, ಅನ್ಯರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ವಿರುದ್ಧ, ಸಕಾಲದಲ್ಲಿ ಕ್ರಮ ತೆಗೆದುಕೊಳ್ಳಲು ವಿಫಲರಾದ ಗೃಹ ಸಚಿವರ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಆದರೆ ಕಾನೂನು ಸಚಿವ ಸುರೇಶ್ ಕುಮಾರ್ ವಿರುದ್ಧ ಒಂದೇ ಒಂದು ಘೋಷಣೆಯೂ ಕೇಳಿಬರಲಿಲ್ಲ. ಎಡಗೈಗೆ, ತಲೆಗೆ ಕಪ್ಪುಪಟ್ಟಿ ಧರಿಸಿ ಎಲ್ಲ ಪತ್ರಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಬೇಕೇಬೇಕು ನ್ಯಾಯ ಬೇಕು, ವಿ ವಾಂಟ್ ಜಸ್ಟಿಸ್, ಮತಿಗೇಡಿ ಸರಕಾರಕ್ಕೆ ಧಿಕ್ಕಾರ, ಕರಿಕೋಟಿನ ಗೂಂಡಾ ವಕೀಲರಿಗೆ ಧಿಕ್ಕಾರ, ಕಾನೂನಂತೆ ಕಾನೂನು ಅವರಪ್ಪಂದಂತೆ ಕಾನೂನು ಮುಂತಾದ ಘೋಷಣೆಗಳನ್ನು ಕೂಗುತ್ತ ಪ್ರೆಸ್ ಕ್ಲಬ್‌ನಿಂದ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಎದಿರು ಶಾಂತಿಯುತ ಮೆರವಣಿಗೆ ಕೈಗೊಂಡರು. ನಂತರ ಪತ್ರಕರ್ತರ ನಿಯೋಗ ರಾಜ್ಯಪಾಲರನ್ನು ಕೂಡ ಭೇಟಿ ಮಾಡಿ ವಕೀಲರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ಮನವಿಪತ್ರ ಸಲ್ಲಿಸಿತು.












Click it and Unblock the Notifications