ಅನೈತಿಕ ಸಂಬಂಧ ಬಯಲಾಗಿ ವರ ಆತ್ಮಹತ್ಯೆ

ಮೈಸೂರಿನ ಇಲವಾಲದ ನಿವಾಸಿ ಶಿಕ್ಷಕಿಯೂ ಆಗಿರುವ ಗೀತಾ ಎಂಬಾಕೆಗೂ ಎಚ್.ಡಿ.ಕೋಟೆ ತಾಲೂಕು ಹಳ್ಳದಮನುಗನಹಳ್ಳಿಯ ನಿವಾಸಿ ಮಂಜುನಾಥ ಎಂಬಾತನಿಗೆ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಪಾಲಿಕೆ ಸಮುದಾಯ ಭವನದಲ್ಲಿ ಫೆಬ್ರವರಿ 23 ಮತ್ತು 24ರಂದು ವಿವಾಹ ನಿಶ್ಚಯವಾಗಿತ್ತು. ಅದರಂತೆ ಮದುವೆ ಮಂಟಪಕ್ಕೆ ಎರಡು ಕಡೆಯವರು ಆಗಮಿಸಿದ್ದರು.
ಮದುವೆ ಸಂಪ್ರದಾಯದಂತೆ ನಿನ್ನೆ ರಾತ್ರಿ(ಫೆ.23) ವರೋಪಚಾರವೂ ನಡೆದಿತ್ತು. ಆದರೆ ವಿವಾಹ ಮಂಟಪದಲ್ಲಿದ್ದ ವರ ಮಂಜುನಾಥ ವಿವಾಹಕ್ಕೆ ಬಂದಿದ್ದ ಹೆಂಗಸಿನೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದುದು ಕೆಲವರ ಅನುಮಾನಕ್ಕೆ ಕಾರಣವಾಗಿತ್ತು. ವಿಷಯ ತಿಳಿದ ಕೆಲವರು ಈ ಬಗ್ಗೆ ವಿಚಾರಿಸಿದಾಗ, ಆಕೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು, ಗಂಡನೊಂದಿಗೆ ವಿಚ್ಛೇದನ ಪಡೆದಿರುವುದಾಗಿಯೂ, ಆಕೆಗೂ ಮಂಜುನಾಥನಿಗೂ ಅನೈತಿಕ ಸಂಬಂಧವಿರುವುದು ಬಯಲಾಯಿತು.
ವಿಷಯ ತಿಳಿದ ವಧು ಗೀತಾ ನಾನು ಮಂಜುನಾಥನನ್ನು ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಈ ಸಂದರ್ಭ ಗೊಂದಲ ಉಂಟಾಗಿ ವಧುವಿನ ಮನೆಯವರು ವಿವಾಹವನ್ನು ನಿಲ್ಲಿಸಿದ್ದಾರೆ. ಅಲ್ಲದೆ ವರನ ಹಾಗೂ ವಧುವಿನ ಕುಟುಂಬದ ನಡುವೆ ರಂಪಾಟವೂ ನಡೆದಿದೆ. ಆಗ ವಧುವಿನ ಕಡೆಯವರು ಮದುವೆಗಾಗಿ ಖರ್ಚು ಮಾಡಿದ ಹಣವನ್ನು ಕೂಡಲೇ ನೀಡುವಂತೆ ಆಗ್ರಹಿಸಿದ್ದಾರೆ. ಕೊನೆಗೂ ಅನ್ಯಮಾರ್ಗವಿಲ್ಲದೆ ವರನ ಕಡೆಯವರು ಮದುವೆ ಖರ್ಚು 5 ಲಕ್ಷ ರು. ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಅದರಂತೆ ಹಣವನ್ನು ತರುವುದಾಗಿ ಹೇಳಿ ಮದುವೆ ಮಂಟಪದಿಂದ ಹೊರ ನಡೆದ ವರ ಮಂಜುನಾಥ ಭಯದಿಂದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತ ಮದುವೆ ಅರ್ಧಕ್ಕೆ ನಿಂತು ಹೋದ ವಿಚಾರ ತಿಳಿದ ಗೀತಾಳ ದೂರದ ಸಂಬಂಧಿ ಶಿವರಾಜ್ ಎಂಬಾತ ಆಕೆಯನ್ನು ಮದುವೆಯಾಗಲು ಮುಂದೆ ಬಂದಿದ್ದರಿಂದ ಶುಕ್ರವಾರ ಮೈಸೂರಿನ ವಿಜಯನಗರದಲ್ಲಿರುವ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಇಬ್ಬರು ಸಪ್ತಪದಿ ತುಳಿದು ಬಾಳಸಂಗಾತಿಗಳಾದರು. ಆದರೆ ದಿಢೀರ್ ಬೆಳವಣಿಗೆ ವಧು ಗೀತಾಳಿಗೆ ಶಾಕ್ ನೀಡಿದ್ದು ಆಕೆ ಇನ್ನಷ್ಟೆ ಚೇತರಿಸಿಕೊಳ್ಳಬೇಕಿದೆ.












Click it and Unblock the Notifications