• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಕೇಶಿ ಯೋಗೇಶಿ ರಾಮನಗರದಲ್ಲಿ ಡಿಶುಂಡಿಶುಂ

By * ಪೂರ್ಣಚಂದ್ರ ಮಾಗಡಿ
|
CP Yogeshwar and DK Shivakumar clash again in Ramnagar
ರಾಮನಗರ, ಫೆ. 23 : ಒಂದು ಕಾಲದ ಆಪ್ತಮಿತ್ರರು ಈಗ ಬದ್ಧ ವೈರಿಗಳಾಗಿದ್ದಾರೆ. ರಾಮನಗರದ ನಾಯಕರುಗಳಾದ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮತ್ತು ಅರಣ್ಯ ಸಚಿವ ಯೋಗೀಶ್ವರ್ ನಡುವಿನ ವೈಮನಸ್ಯ ಹಾದಿ ರಂಪ ಬೀದಿ ರಂಪವಾಗಿದೆ. ಇವರಿಬ್ಬರ ಕ್ಲ್ಯಾಷಿಂಗ್ ಡ್ಯಾಶಿಂಗ್ ಸ್ಟೋರಿ ನೋಡುಗರಿಗಂತು ಪುಕ್ಕಟೆ ಮನರಂಜನೆ ನೀಡುತ್ತಿದೆ.

ಬುಧವಾರ ರಾಮನಗರ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಇಬ್ಬರ ನಡುವೆ ಧಗಧಗನೇ ಮಾತಿನ ಬೆಂಕಿ ಹೊತ್ತಿಕೊಂಡು ಉರಿಯಿತು. ಯೋಗೀಶ್ವರ್‌ ಅವರನ್ನು ರಣಹೇಡಿ ಎಂದು ಡಿಕೆಶಿ ಮಾತಿನ ಕತ್ತಿ ಝಳಪಿಸಿದರೆ, ಡಿ.ಕೆ.ಶಿಯನ್ನು ಕೊಚ್ಚೆ, ಕೊಳಕು ಮನಸ್ಸಿನ ವ್ಯಕ್ತಿ ಎಂದು ಯೋಗೀಶ್ವರ್ ಕಲ್ಲು ಎಸೆದರು. ಏಕವಚನದಲ್ಲಿ ಇಬ್ಬರೂ ನಾಯಕರು ಕೂಗಾಡಿಕೊಂಡರು.

ರಾಮನಗರ ಹೇಳಿ ಕೇಳಿ ರಾಜಕಾರಣದ ಜಿದ್ದಾಜಿದ್ದಿನ ಅಖಾಡವಾಗಿದೆ. ಕಾಂಗ್ರೆಸ್‌ನಲ್ಲಿ ದೋಸ್ತಿಗಳಾಗಿದ್ದ ಡಿ.ಕೆ.ಶಿ ಯೋಗೀಶ್ವರ್ ಈಗ ಹಾವು ಮುಂಗುಸಿಯಾಗಿದ್ದಾರೆ. ಯೋಗೀಶ್ವರ್ ಮೆಗಾಸಿಟಿ ದಗಾಕೋರ ಎಂದು ರಾಜ್ಯಪಾಲರ ಬಳಿ ನಿಯೋಗ ಕೊಂಡೊಯ್ದಿದ್ದ ಡಿ.ಕೆ.ಶಿ ಅವರು ಯೋಗೀಶರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದರು.

ಅದಕ್ಕೆ ಪ್ರತೀಕಾರವಾಗಿ ಕಳೆದ ವಾರ ಕನಕಪುರದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಅಕ್ರಮ ಕರಿಕಲ್ಲು ಗಣಿಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ಸಚಿವ ಯೋಗೀಶ್ವರ್ ದಾಳಿ ನಡೆಸಿ, ತನಿಖಾ ಸಮಿತಿ ರಚಿಸಿ ಡಿ.ಕೆ.ಶಿಗೆ ಬಿಸಿ ಮುಟ್ಟಿಸಿದ್ದಾರೆ. ಈ ಬೆಳವಣಿಗೆಗಳಿಂದ ಡಿ.ಕೆ.ಶಿ ಯೋಗೀಶ್ವರ್ ದುಶ್ಮನಿ ತ್ಯಾಪೆ ಹಚ್ಚಿದರೂ ಮುಚ್ಚಲಾರದಷ್ಟು ದೊಡ್ಡದಾಗಿ ಬೆಳೆದಿದೆ.

ಇವತ್ತಿನ ಸಭೆಯಲ್ಲಿ ಡಿ.ಕೆ.ಶಿ ಮಾತಿನ ಟಾಂಗ್ ಸಖತ್ತಾಗಿಯೇ ಇತ್ತು. "ಯೋಗೀಶ್ವರ್ ರಣಹೇಡಿ, ಸಭೆಯನ್ನ ನಡೆಸಲಾಗದೇ ಸಭೆಯನ್ನು ಮುಂದೂಡಿ ಪಲಾಯನ ಮಾಡಿದರು. ಅವರು ಮತ್ತು ಅವರ ಆಪ್ತ ಸಹಾಯಕರುಗಳು ಅಧಿಕಾರಿಗಳಿಂದ ಹಫ್ತಾ ವಸೂಲಿ ಮಾಡಿ ಕೋಟಿ ಕೋಟಿ ತಿಜೋರಿಗೆ ಇಳಿಸಿಕೊಳ್ಳುತ್ತಿದ್ದಾರೆ. ಏಳೆಂಟು ಬಾರಿ ಕಾಮಗಾರಿಗಳಿಗೆ ಟೆಂಡರ್ ಕರೆದರೂ ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಎಲ್ಲದಕ್ಕೂ ಕಮಿಷನ್ ಕೇಳುವ ಯೋಗೀಶ್ವರ್‌ರಿಂದ ಬೇಸತ್ತಿದ್ದಾರೆ" ಎಂದು ಆರೋಪಗಳ ಸುರಿಮಳೆಗೈದರು.

"ಗಣಿ ವಿಚಾರ ಎದುರಾಗುತ್ತಿದ್ದಂತೆ, ತನ್ನ ಬಣ್ಣ ಬಯಲಾಗುತ್ತದೆಂದು ಸಭೆಯಿಂದ ಶಾರ್ಟ್ ಸರ್ಕ್ಯೂಟ್ ಆಗಿದ್ದನ್ನೆ ನೆಪ ಮಾಡಿಕೊಂಡು ಹೊರಹೋಗಿದ್ದಾರೆ. ಲೂಟಿ ಅವ್ಯವಹಾರವನ್ನೇ ಕಾಯಕ ಮಾಡಿಕೊಂಡಿರುವ ಯೋಗೀಶ್ವರ್‌ರನ್ನ ಸಚಿವ ಸ್ಥಾನದಿಂದ ವಜಾಗೊಳಿಸಬೇಕು" ಎಂದು ಸಿಎಂ ಗೆ ಮನವಿ ಮಾಡುವುದಾಗಿ ಡಿ.ಕೆ.ಶಿ ತಿಳಿಸಿದರು.

ಕೆಳ ಸಾಲಿನಲ್ಲಿ ಕುಳಿತ ಡಿ.ಕೆ.ಶಿ : ಸಭೆಯಲ್ಲಿ ಕ್ಷಣಕ್ಷಣಕ್ಕೂ ಬಿಸಿ ಏರುತ್ತಿದ್ದಂತೆ ಡಿ.ಕೆ.ಶಿಯವರನ್ನು ಸಚಿವರ ಸಾಲಿನಲ್ಲಿ ಕೂರುವಂತೆ ಅಧಿಕಾರಿಗಳು ಮನವಿ ಮಾಡಿದರು. ಅದಕ್ಕೆ ಡಿ.ಕೆ.ಶಿ ನಾನು ಗಣಿ ಕಳ್ಳ ಎಂದು ಹೇಳಿದ್ದಾರೆ, ಆದ್ದರಿಂದ ನಾನು ವೇದಿಕೆ ಏರುವುದಿಲ್ಲವೆಂದು ಕೆಳಗಿನ ಸಾಲಿನಲ್ಲಿ ಕುಳಿತರು. ಈ ನಡುವೆ ಸಭೆಯ ನಡುವೆ ಆಗಾಗ್ಗೆ ಇಬ್ಬರ ನಡುವೆ ಮಾತಿನ ಕಿಡಿ ಹೊತ್ತಿಕೊಳ್ಳುತ್ತಿತ್ತು.

ಶಾರ್ಟ್‌ ಸರ್ಕ್ಯೂಟ್ : ಸಭೆ ಕಾವೇರುತ್ತಿದ್ದಂತೆ ಸಭಾಂಗಣದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, ಧಗಧಗನೆ ಹೊತ್ತಿಕೊಂಡ ವಿದ್ಯುತ್ ದೀಪವನ್ನು ನಂದಿಸಿದರು. ಡಿ.ಕೆ.ಶಿ ಮತ್ತು ಯೋಗೀಶ್ವರ್ ನಡುವೆ ಮಾತಿನ ಕಿಡಿ ಹೊತ್ತಿಕೊಳ್ಳುತ್ತಿದ್ದಂತೆ ವಿದ್ಯುತ್ ದೀಪ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದ್ದು ಕಾಕತಾಳೀಯ.

ರಂಗಾದ ಯೋಗಿ : ಇವೆಲ್ಲಾ ಬೆಳವಣಿಗೆಯಾಗುವಷ್ಟರಲ್ಲಿ ಯೋಗೀಶ್ವರ್ ವಿರುದ್ಧ ಬೆಂಗಳೂರಿನ 8ನೇ ಎ.ಸಿ.ಎಂ.ಎಂ ನ್ಯಾಯಾಲಯದಲ್ಲಿ ಮೆಗಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲಾಗಿರುವುದು ಯೋಗೀಶ್ವರ್ ಗಮನಕ್ಕೆ ಬಂದಿತ್ತು. ಇದರಿಂದ ಕೊತ ಕೊತ ಕುದಿಯುತ್ತಿದ್ದ ಯೋಗೀಶ್ವರ್ ಮಾಧ್ಯಮದವರಿಗೆ ಪ್ರಕರಣದ ಬಗ್ಗೆ ಹೇಳಿಕೆಯನ್ನು ನೀಡಲಿಲ್ಲ. ಆದರೆ ಡಿ.ಕೆ.ಶಿ ವಿರುದ್ದ ಮಾತ್ರ ಮಾತಿನ ಕೆಂಡವನ್ನ ಸುರಿಸಿದರು.

"ಡಿ.ಕೆ.ಶಿ ಒಬ್ಬ ಕೊಚ್ಚೆ, ಕೊಳಕು ಮನಸ್ಸಿನ ವ್ಯಕ್ತಿ. ಅವರು ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಸಭೆಗೆ ಬಂದಿದ್ದಾರೆ. ಆದ್ದರಿಂದ ಮನಸ್ಸಿಗೆ ಬಂದದ್ದನ್ನಲ್ಲ ಹೇಳುತ್ತಿದ್ದಾರೆ. ಆ ವ್ಯಕ್ತಿಯ ಮಾತಿನಿಂದ ನಾನು ಸಭೆಯನ್ನು ಮುಂದೂಡಿಲ್ಲ. ಮುಂದಿನ ವಾರವೂ ಕೂಡ ಕೆಡಿಪಿ ಸಭೆ ನಡೆಸುತ್ತೇನೆ. ಆ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿ. ನಾನೇಕೇ ಯಾರ‍್ಯಾರಿಗೋ ಹೆದರಿ ಸಭೆಯನ್ನ ಮುಂದೂಡಲಿ" ಎಂದು ಡಿ.ಕೆ.ಶಿಗೆ ಯೋಗೀಶ್ವರ್ ಎದಿರೇಟು ಕೊಟ್ಟರು.

ಕಳೆದ 20 ವರ್ಷಗಳಿಂದ ರಾಜ್ಯದ ಅಧಿಕಾರಿಗಳಿಂದ, ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುವ ಕಾಯಕವನ್ನು ಡಿ.ಕೆ.ಶಿವಕುಮಾರ್ ಚೆನ್ನಾಗಿಯೇ ಮಾಡಿದ್ದಾರೆ. ತಾನು ಮಾಡಿದ್ದನ್ನ ಬೇರೆಯವರ ಮೇಲೆ ಆರೋಪಿಸಿ ತಾನು ಸಭ್ಯನೆಂದು ಮಾಧ್ಯಮದೆದಿರು ತೋರಿಸಿಕೊಳ್ಳಲು ಪೊಳ್ಳು ಪ್ರಾಮಾಣಿಕತೆಯ ಮಾತುಗಳನ್ನಾಡುತ್ತಿದ್ದಾರೆ. ಯಾರ‍್ಯಾರು ಏನೇನೆಂಬುದು ಇಡೀ ರಾಜ್ಯದ ಜನತೆಗೆ ಶೀಘ್ರದಲ್ಲೇ ಗೊತ್ತಾಗಲಿದೆ ಎಂದು ಡಿ.ಕೆ.ಶಿ ವಿರುದ್ದ ಯೋಗೀಶ್ವರ್ ಚಾಟಿ ಬೀಸಿದರು.

ಡಿ.ಕೆ.ಶಿ ಪ್ರವೇಶವಾಗುತ್ತಿದ್ದಂತೆ ಸಭೆಯಲ್ಲಿ ಬೆಂಕಿ ಹೊತ್ತಿಕೊಂಡು ಸಭೆಯನ್ನು ಬರ್ಖಾಸ್ತು ಮಾಡುವಂತಾಯಿತು. ಪೂರ್ವನಿಗದಿಯಾಗಿ ಸಿದ್ಧತೆಗಳನ್ನು ಮಾಡಿಕೊಳ್ಳದೇ ಬಂದಿದ್ದುದು ಇಷ್ಟೆಲ್ಲಾ ರಂಪ ರಾದ್ದಾಂತಕ್ಕೆ ಕಾರಣವಾಯಿತು. ಒಟ್ಟಾರೆ ಸಭೆ ಹೆಚ್ಚಾಗಿ ಇಬ್ಬರು ನಾಯಕರ ಮಾತಿನ ಚಕಮಕಿ ಪ್ರತಿಷ್ಠೆಯ ಮಾತುಗಳಿಗೆ ಹೆಚ್ಚು ಮೀಸಲಾಗಿತ್ತು ಎಂದು ಇಬ್ಬರು ನಾಯಕರ ವಿರುದ್ಧ ಶಾಸಕ ಬಾಲಕೃಷ್ಣ ಕೆಂಡ ಕಾರಿದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
DK Shivakumar and CP Yogeshwar clash again in Ramnagar on February 23. The fight between both bete noires from Ramnagar district has become a subject of fun for the onlookers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more