ಅಶ್ಲೀಲಚಿತ್ರ: ಸಚಿವ ಸವದಿ ಹೇಳುವುದೇನು?

ಇದನ್ನು ಸಚಿವ ಪಾಲೇಮಾರ್ ಅವರು ತಮ್ಮ ಮೊಬೈಲಿನಿಂದ ನನಗೆ ಕಳಿಸಿದ್ದರು. ಅಸಲಿಗೆ ಅದು ಅಶ್ಲೀಲ ಚಿತ್ರ ಅಲ್ಲವೇ ಅಲ್ಲ. ಮಲ್ಪೆ ಬೀಚಿನಲ್ಲಿ ನಡೆದಿರುವ ಕಾಮಕೇಳಿಯ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಇಲ್ಲೊಂದು ವಿಡಿಯೋ ತುಣುಕು ಇದೆ. ಅದನ್ನೂ ನೋಡಿ. ನಿಮಗೇನು ಅನಿಸುತ್ತದೆ ಹೇಳಿ ಎಂದು ಪಾಲೇಮಾರ್ ಹೇಳಿದರು. ಅದಕ್ಕಾಗಿ ನೋಡಿದೆ ಎಂದು ಸವದಿ ತಿಪ್ಪೆ ಸಾರಿಸುವ ಕಾರ್ಯ ಮಾಡಿದ್ದಾರೆ.
ಸವದಿಯ ಈ ನೀರಸ ವಾದ ಕೇಳಿದ ಮೇಲೆ ಜನ ಪ್ರಶ್ನೆಗಳ ಸುರಿ ಮಳೆಗೆರೆಯುತ್ತಿದ್ದಾರೆ.
1. ಸವದಿ ಹೇಳುವಂತೆ ಪಾಲೇಮಾರ್ ಇವರಿಗೇ ಅದನ್ನು ಕಳಿಸಿದ್ದು ಯಾಕೆ? ನೇರವಾಗಿ ಸಿಎಂ ಸದಾನಂದ ಗೌಡರೋ ಅಥವಾ ಮತ್ಯಾರೋ ಹಿರಿಯ ಸಚಿವರ ಗಮನಕ್ಕೆ ತರಬಹುದಿತ್ತಲ್ಲಾ? ಅಷ್ಟಕ್ಕೂ ಇದಕ್ಕಾಗಿ ವಿಧಾನಸೌಧವನ್ನೇ ಏಕೆ ಆಯ್ಕೆ ಮಾಡಿಕೊಂಡರು. ಅದೂ ಕಲಾಪ ನಡೆಯುತ್ತಿರುವಾಗ ಇದರ ಅಗತ್ಯವೇನು? ಸದನದಲ್ಲಿ ಇಂತಹ ಕೀಳುಮಟ್ಟದ ಚಿತ್ರಗಳನ್ನು ವೀಕ್ಷಿಸಬಹುದಾ? ಎಂದು ಜನ ಆಕ್ರೋಶಭರಿತರಾಗಿ ಕೇಳುತ್ತಿದ್ದಾರೆ.
2. ಇನ್ನು, ಇಡೀ ನಾಡಿನ ಜನ ಟಿವಿಗಳಲ್ಲಿ ಬಿತ್ತರವಾಗುತ್ತಿರುವ ಸವದಿ ಅಶ್ಲೀಲ ಪುರಾಣ ದೃಶ್ಯಗಳನ್ನು ಖುದ್ದಾಗಿ ನೋಡುತ್ತಿದ್ದಾರೆ. ಸವದಿ ಸಾಹೇಬ ಹೇಳುವಂತೆ ಅದು ಯಾವುದೋ ಮಹಿಳೆಯ ಮೇಲಿನ ಅತ್ಯಾಚಾರದ ದೃಶ್ಯ ಅಲ್ಲವೇ ಅಲ್ಲ ಎನ್ನಬಹುದು. ಏಕೆಂದರೆ ಅದರಲ್ಲಿ ಮೊದಲು ಮಹಿಳೆಯೊಬ್ಬಳು ವಯ್ಯಾರದಿಂದ ಸೀರೆ ಬಿಚ್ಚುವ ದೃಶ್ಯವಿದೆ. ಆನಂತರ ಇನ್ನೂ ನಾಲ್ಕಾರು ಮಹಿಳೆಯರು ಅವಳಿಗೆ ಸಾಥ್ ನೀಡುತ್ತಾರೆ. ಹೀಗೆ ಇನ್ನೂ ಅನೇಕ ಕಚ್ಚಾ ಕಚ್ಚಾ ದೃಶ್ಯಗಳು ಅದರಲ್ಲಿ ನುಗ್ಗಿಬರುತ್ತವೆ. ನಮ್ಮ ಸವದಿ ಸಾಹೇಬ ತೊಡೆಯ ಮೇಲೆ ಮೊಬೈಲ್ ಅನ್ನು ಇಟ್ಟುಕೊಂಡು ಯಾರೂ ಗಮನಿಸುತ್ತಿಲ್ಲ ಅಂದ್ಕೊಂಡು ಅದನ್ನೇ ವೀಕ್ಷಿಸತೊಡಗುತ್ತಾರೆ.
3. ತಾನು ಯಾವುದೇ ತಪ್ಪು ಮಾಡಿಲ್ಲ ಎಂದೂ ಸವದಿ ಹೇಳುತ್ತಿದ್ದಾರೆ. ಹಾಗಾದರೆ ಸವದಿ ತಮ್ಮ ಸಾಚಾತನ ಸಾಬೀತು ಪಡಿಸಲು ತಮ್ಮ ಮೊಬೈಲಿನಲ್ಲಿರುವ ವಿಡಿಯೋ ತುಣುಕನ್ನು ಇದೇ ಟಿವಿ, ವೆಬ್ ಸೈಟ್ ಮಾಧ್ಯಮಗಳ ಮುಖಾಂತರ ನಾಳೆ ರಾಜ್ಯದ ಜನತೆ ಮುಂದೆ ಪ್ರದರ್ಶಿಸುತ್ತಾರಾ? ಕಾದು ನೋಡಿ!












Click it and Unblock the Notifications