ಗಣರಾಜ್ಯ ದಿಲ್ಲಿ ಪಥಸಂಚಲನದಲ್ಲಿ ಕರಾವಳಿ ಭೂತಕೋಲ

ಕರ್ನಾಟಕದ 55ಕ್ಕೂ ಹೆಚ್ಚು ಕಲಾವಿದರು ಭೂತವೇಷ ಧರಿಸಿ ಕುಣಿಯಲಿದ್ದಾರೆ. ಗಗ್ಗರ ಕಟ್ಟಿ ಕುಣಿವ ತುಳುನಾಡಿನ ಮಾಯಕದ ಭೂತಗಳು, ಸತ್ಯದ ರಾಜನ್ ದೈವಗಳು, ನಂಬಿದವರಿಗೆ ಇಂಬುಕೊಡುವ ಕಲ್ಲುರ್ಟಿ, ಕೊರಗ ತನಿಯ, ಶಿರಾಡಿ ಭೂತ, ಪಂಜುರ್ಲಿ, ಗುಳಿಗ, ಜುಮಾದಿ, ಮಲರಾಯ, ಮೊಯ್ಯೆತ್ತಾಯಿ, ಪಿಲಿಚಾಮುಂಡಿ ಭೂತ ವೇಷಗಳನ್ನು ಅಚ್ಚರಿಯಿಂದ ರಾಜ್ಯೋತ್ಸವದ ಪರೇಡ್ ನಲ್ಲಿ ಎಲ್ಲರೂ ನೋಡಲಿದ್ದಾರೆ.
ಕರ್ನಾಟಕ ಕುಣಿತಗಳಿಗೆ ಫೇಮಸ್. ಯಕ್ಷಗಾನ, ಕಂಸಾಳೆ, ಕರಡಿ ಕುಣಿತ, ಹುಲಿ ಕುಣಿತ, ನಗಾರಿ ಕುಣಿತ, ನವಿಲು ಕುಣಿತ, ಪೂಜಾ ಕುಣಿತ, ಕಳಶ ಕುಣಿತ, ವೀರಗಾಸೆ, ಹುಲಿ ಕುಣಿತ, ಡೊಳ್ಳು ಕುಣಿತ, ಭೂತ ಕುಣಿತ ಸೇರಿದಂತೆ ಅಗಣಿತ ಕುಣಿತಗಳ ನಾಡಿದು.
ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿ ಭೂತ ಕುಣಿತ ಜನಪ್ರಿಯ. ಇದು ಕೇವಲ ಕುಣಿತ ಮಾತ್ರವಲ್ಲದೇ ಹಲವು ಶತಮಾನಗಳಿಂದ ನಡೆದುಬಂದ ಸಂಪ್ರದಾಯ, ನಂಬಿಕೆ, ಆಚರಣೆ, ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿದೆ. ಹಟ್ಟಿಗಳಲ್ಲಿರುವ ದನಕರುಗಳನ್ನು, ನಂಬಿದ ಜನರನ್ನು, ಕೃಷಿಯನ್ನು ಆಯಾ ಸೀಮೆಯ ದೈವಗಳು ಕಾಪಾಡುತ್ತವೆ ಎಂಬ ಪ್ರತೀತಿಯಿದೆ.
ಹಂಪಿ ಮ್ಯೂಸಿಯಂ, ಬಿಜಾಪುರದ ಗೋಲ್ ಗುಂಬಜ್, ರಂಗನತಿಟ್ಟು ಪಕ್ಷಿಧಾಮ, ಕರ್ನಾಟಕದ ಕಾಫಿ ಲ್ಯಾಂಡ್ ಮತ್ತು ದಕ್ಷಿಣ ಕನ್ನಡದ ಭೂತಾರಾಧನೆ ಎಂಬ ಐದು ಟ್ಯಾಬ್ಲೊಗಳಲ್ಲಿ ಅಂತಿಮವಾಗಿ ಭೂತಾರಾಧನೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಕಾರ್ಣಿಕವೆಂದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರತಿಷ್ಠಿತ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶ ಪಡೆದದ್ದು ಕರ್ನಾಟಕ ಮಾತ್ರ. ಈ ವರ್ಷ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ನಡುವೆ ಸ್ತಬ್ಧ ಚಿತ್ರ ಸ್ಪರ್ಧೆ ನಡೆಯುವಂತೆ ಕಾಣುತ್ತಿದೆ.
ಕೇವಲ 13 ರಾಜ್ಯಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಛಾನ್ಸ್ ಪಡೆದಿವೆ. ಹೀಗಾಗಿ ಕರಾವಳಿ ಭೂತಗಳು ಉಳಿದ 12 ರಾಜ್ಯಗಳ ಮೇಲೆ ಮಾಯಕದ ದೃಷ್ಟಿ ಬೀರಿ ಗೆಲುವು ಪಡೆಯುವುದು ಖಾತ್ರಿ ಎಂದು ನಾವು ನಂಬಿಕೊಳ್ಳಬಹುದು. ನಂಬಿದವರಿಗೆ ಇಂಬು ಕೊಡುವ ಭೂತಾರಾಧನೆ ಎಲ್ಲರ ಗಮನಸೆಳೆಯುವಲ್ಲಿ ಸಂದೇಹವೂ ಇಲ್ಲ.
ಕಳೆದ ವರ್ಷ ಕರ್ನಾಟಕ ಪ್ರದರ್ಶಿಸಿದ 8ನೇ ಶತಮಾನದ ಪಟ್ಟದಕಲ್ಲು ದೇಗುಲ ಟ್ಯಾಬ್ಲೊ ಎರಡನೇ ಬಹುಮಾನ ಪಡೆದಿತ್ತು. ಡೊಳ್ಳು ಕುಣಿತ ಪ್ರದರ್ಶಿಸಿ 'ಅತ್ಯುತ್ತಮ ಶಾಲಾ ಮಕ್ಕಳ ತಂಡ' ಪ್ರಶಸ್ತಿಯನ್ನು ರಾಜ್ಯ ಪಡೆದುಕೊಂಡಿತ್ತು.
ಚುನಾವಣಾ ಆಯೋಗ ಮತದಾನದ ಮಹತ್ವ ಸಾರ ಸಾರುವ ಟ್ಯಾಬ್ಲೊ ಪ್ರದರ್ಶಿಸಲಿದೆ. ನಮ್ಮ ಭೂತಗಳೆದುರು ಇದು ಸಪ್ಪೆ ಎನ್ನುವುದು ನನ್ನ ಅಭಿಪ್ರಾಯ. ಮೊತ್ತಮೊದಲ ಬಾರಿಗೆ ಭಾಗವಹಿಸುವ ಚತ್ತಿಸ್ ಗಢದ ಜಿಂಗಾರಿ ಮತ್ತು ದೊಂಡಕ್ಕಿ ಕಲೆ ಸಾರುವ ಟ್ಯಾಬ್ಲೊ ಕೂಡ ಮಾಯಕದ ದೈವಗಳ ಮುಂದೆ ಮಂಕಾಗಿ ಕಾಣಬಹುದು.
ಜಮ್ಮು ಕಾಶ್ಮಿರ ರಾಜ್ಯದ ಸಂಸ್ಕೃತ್ತಿ ಸಾರುವ ಟ್ಯಾಬ್ಲೊ ಕೂಡ ಪ್ರಥಮ ಬಹುಮಾನ ಪಡೆಯುವುದು ಡೌಟ್. ಮೇಘಾಲಯ, ನಾಗಲ್ಯಾಂಡ್ ಮತ್ತು ಅಸ್ಸಾಮ್ಮಿನ ಟ್ಯಾಬ್ಲೊಗಳಿಗಿಂತಲೂ ನಮ್ಮ ಟ್ಯಾಬ್ಲೊ ಹೆಚ್ಚು ಆಕರ್ಷಕವಾಗಿರಲಿದೆ.
ಸುಮಾರು 55 ಕಲಾವಿದರು ಈ ಭೂತ ನೃತ್ಯ ಮಾಡುವುದನ್ನು ಇಡೀ ದೇಶವೇ ಅಚ್ಚರಿಯಿಂದ ನೋಡಲಿದೆ. ತುಳುನಾಡಿನ ಭೂತಕೋಲದ ವೈಭವ ಉತ್ತರ ಭಾರತದ ಟ್ಯಾಬ್ಲೊಗಳನ್ನು ಹಿಂದಿಕ್ಕಿ ಕರ್ನಾಟಕಕ್ಕೆ ಪ್ರಥಮ ಪ್ರಶಸ್ತಿ ದೊರಕಿಸಿಕೊಡಲಿ ಎನ್ನುವುದು ಪ್ರಾಥನೆ. ಸ್ವಾಮೀ ದೈವವೇ...!!












Click it and Unblock the Notifications