ಉಪ ಲೋಕಾಯುಕ್ತ ಚಂದ್ರಶೇಖರಯ್ಯ ಸಹ ಭೂಕಳಂಕಿತರೇ!

'ನ್ಯಾಯಾಂಗ ಬಡಾವಣೆಯಲ್ಲಿ ನಾನೊಬ್ಬನೇ ನಿವೇಶನ ಹೊಂದಿಲ್ಲ. ನನಗಿಂತಲೂ ಮೊದಲೇ ಅನೇಕ ನ್ಯಾಯಾಧೀಶರು ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ' ಎಂದು ನ್ಯಾ ಚಂದ್ರಶೇಖರಯ್ಯ ಅವರು ತಮ್ಮ ಮೇಲಿನ ಆರೋಪಕ್ಕೆ ಉತ್ತರಿಸಿದ್ದಾರೆ. ತನ್ಮೂಲಕ ಮೇಲ್ನೋಟಕ್ಕೆ ಈ ಆರೋಪವನ್ನು ಅವರೇಒಪ್ಪಿಕೊಂಡಂತಾಗಿದೆ.
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅನ್ನುವಂತೆ ಈ ಹಿಂದಿನಿಂದಲೂ ಅನೇಕ ನ್ಯಾಯಾಧೀಶರು ಇಲ್ಲಿ ನಿವೇಶನ ಪಡೆದಿದ್ದಾರೆ. ಸೋ, ನನಗೊಬ್ಬನಿಗೇ ಆ ಕಳಂಕ ತಟ್ಟುವುದಿಲ್ಲ ಎನ್ನುವ ಮೂಲಕ ನ್ಯಾ ಚಂದ್ರಶೇಖರಯ್ಯ ತಾವು ಅಕ್ರಮವಾಗಿ ನಿವೇಶನ ಪಡೆದಿರುವುದಕ್ಕೆ ತರ್ಕರಹಿತ ಸಮಜಾಯಿಷಿ ನೀಡಿದ್ದಾರೆ.
ಅಸಲಿಗೆ ಕೋರ್ಟ್ ಉದ್ಯೋಗಿಗಳಿಗೆ ಮಾತ್ರವೇ ಈ ಬಡಾವಣೆಯಲ್ಲಿ ನಿವೇಶನ ನೀಡಬೇಕು ಎಂಬ ಕಾನೂನು ಇದೆ. ಆದರೆ ಈ ಕಾನೂನು ಪರಿಪಾಲಕ ನ್ಯಾಯಮೂರ್ತಿಗಳೂ ತಾವೂ ಉದ್ಯೋಗಿಗಳೇ ಎಂಬ ತರ್ಕಕ್ಕೆ ಬಿದ್ದು ಮನಸೋ ಇಚ್ಛೆ ಇಲ್ಲಿ ನಿವೇಶನಗಳನ್ನು ಪಡೆದಿದ್ದಾರೆ. ನೌಕರರಿಗೆ ಮೀಸಲಾದ ಅನ್ನವನ್ನು ಈ ನ್ಯಾಯದೇವತೆಗಳು ಯಾವುದೇ ಎಗ್ಗಿಲ್ಲದೆ ಕಬಳಿಸಿದ್ದಾರೆ.
ಮತ್ತು ದೌರ್ಭಾಗ್ಯದ ಸಂಗತಿಯೆಂದರೆ ಅದನ್ನು ಇಂದಿಗೂ ಸಮರ್ಥಿಸಿಕೊಳ್ಳುತ್ತಲೂ ಇದ್ದಾರೆ. ನ್ಯಾಯಮೂರ್ತಿಗಳಿಗೇ ಕಾನೂನು ಬೋಧಿಸುವಂತಹ ದುರವಸ್ಥೆ ಈ ನೆಲಕ್ಕೆ ಒದಗಿಬಂದಿರುವುದು ಅಪಾಯಕಾರಿ ಬೆಳವಣಿಗೆಯೇ. ಯಲಹಂಕ ಬಳಿಯ ಅಳ್ಳಾಳ ಸಂದ್ರದಲ್ಲಿ ನಿರ್ಮಾಣವಾಗಿರುವ ವಿವಾದಿತ ನ್ಯಾಯಾಂಗ ಬಡಾವಣೆಯಲ್ಲಿ ನ್ಯಾ ಚಂದ್ರಶೇಖರಯ್ಯ ಅವರು ತಮ್ಮ ಹೆಸರಲ್ಲಿ ನಿವೇಶನ ಹೊಂದಿದ್ದಾರೆ. ಎಟಿ ರಾಮಸ್ವಾಮಿ ವರದಿಯಲ್ಲೂ ಇವರ ಹೆಸರು ಉಲ್ಲೇಖವಾಗಿದೆ.
ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಂಘದ ಸದಸ್ಯರಾದ ಬಳಿಕ ನ್ಯಾ ಚಂದ್ರಶೇಖರಯ್ಯ ಅವರ ಹೆಸರಿಗೆ 80x50 ಅಳತೆಯ ನಿವೇಶನವನ್ನು (ಸಂಖ್ಯೆ 1296/11) ಸರಿಯಾಗಿ 15 ವರ್ಷಗಳ ಹಿಂದೆ (18-01-1997) ಕ್ರಯ ಮಾಡಿಕೊಡಲಾಗಿದೆ. ಆದರೆ ಇದು ಗೃಹ ನಿರ್ಮಾಣ ಸಂಘದ ಬೈಲಾಗೆ ಸಂಪೂರ್ಣ ವಿರುದ್ಧವಾಗಿದೆ.












Click it and Unblock the Notifications