RSS ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಬಿಜೆಪಿ ತ್ರಿಮೂರ್ತಿಗಳು

ಸಿಎಂ ಸದಾನಂದ ಗೌಡ, ಈಶ್ವರಪ್ಪ ಮತ್ತು ಯಡಿಯೂರಪ್ಪ ಈ ಸಭೆಯಲ್ಲಿ ಭಾಗವಹಿಸಿದ್ದರು. ವಿಧಾನಪರಿಷತ್ ಸದಸ್ಯ, ಯಡಿಯೂರಪ್ಪ ಅವರ ಪರಮಾಪ್ತ ಲೆಹರ್ ಸಿಂಗ್ ಮನೆಯಲ್ಲಿ ನಡೆದಿದ್ದ ಈ ಸಭೆಯಲ್ಲಿ, ನೀವು ಈ ಮಟ್ಟಕ್ಕೆ ಬರಬೇಕಾದರೆ ನಮ್ಮ ಮತ್ತು ಕಾರ್ಯಕರ್ತರ ಪರಿಶ್ರಮ ಎನ್ನುವುದನ್ನು ಮರೆಯಬೇಡಿ. ಪಕ್ಷ ಇದ್ದರೆ ನೀವು, ನಿಮ್ಮಿಂದ ಪಕ್ಷವಲ್ಲ ಎಂದು ಆರ್ಎಸ್ಎಸ್ ಮುಖಂಡರು ಬಿಜೆಪಿಯ ಹಿರಿಯ ಮೂರು ಮುಖಂಡರಿಗೆ ಸರಿಯಾಗಿ ಚಾಟಿ ಬೀಸಿ ಕಳುಹಿಸಿದ್ದಾರೆ.
ಒಂದು ಹಂತದಲ್ಲಿ ಈಶ್ವರಪ್ಪ ಮತ್ತು ಯಡಿಯೂರಪ್ಪ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾಗ ಮಧ್ಯಪ್ರವೇಶಿಸಿದ ಸಂಘದ ಮುಖಂಡರು, ನೀವು ಇದೇ ರೀತಿಯಲ್ಲಿ ಕಿತ್ತಾಡಿದರೆ ರಾಜ್ಯದ ಆಡಳಿತ ಯಂತ್ರ ಕುಸಿಯುವುದಿಲ್ಲವೇ? ಪಕ್ಷಕ್ಕೆ ಮತಹಾಕಿದ ಸಾರ್ವಜನಿಕರಿಗೆ ಹೇಗೆ ಮುಖ ತೋರಿಸುತ್ತೀರಾ? ಬಿಜೆಪಿಗೆ ಜನ ಮತ್ತೆ ವೋಟು ನೀಡುತ್ತಾರಾ ಎನ್ನುವ ಕನಿಷ್ಠ ಜ್ಞಾನ ನಿಮಗಿಲ್ಲವೇ ಸಂಘದ ಮುಖಂಡರು ಸರಿಯಾಗಿ ಬೆಂಡೆತ್ತಿದ್ದಾರೆ.
ಪಕ್ಷದ ಸಚಿವರುಗಳು ಯಾರ ಪರ ಕೂಡಾ ವಕಾಲತ್ತು ವಹಿಸಿ ಮಾಧ್ಯಮದ ಮುಂದೆ ಹೇಳಿಕೆ ನೀಡಬಾರದು. ಇನ್ನು ಮುಂದೆ ಅವರೆಲ್ಲಾ ಬಾಲ ಮುದುಡಿ ಕೂತರೆ ಸರಿ ಇಲ್ಲಾಂದ್ರೆ ಸಚಿವ ಸ್ಥಾನದಿಂದ ಅಲ್ಲದೇ ಪಕ್ಷದಿಂದಲೇ ಕಿತ್ತೊಗೆಯುತ್ತೇವೆ ಹುಷಾರ್ ಎಂದು ಎಚ್ಚರಿಸಿದ್ದಾರೆ.
ಸಂಘದ ಮುಖಂಡರ ಈ ರೌದ್ರಾವಾತಾರಕ್ಕೆ ಬೆಚ್ಚಿಬಿದ್ದ ಸದಾನಂದ ಗೌಡ, ಈಶ್ವರಪ್ಪ ಮತ್ತು ಯಡಿಯೂರಪ್ಪ ತುಟಿಕ್ ಪಿಟಿಕ್ ಅನ್ನದೆ ಸಭೆಯಿಂದ ಹೊರ ಬಂದಿದ್ದಾರೆ. ಈ ಸಭೆಯೇ ಪಕ್ಷದ ತಾತ್ಕಾಲಿಕ ಭಿನ್ನಮತ ಶಮನಕ್ಕೆ ಕಾರಣವೆನ್ನಲಾಗಿದೆ.











Click it and Unblock the Notifications