ಸೂರ್ಯ ನಮಸ್ಕಾರದ ವಿರುದ್ಧ ಮುಸ್ಲಿಂ ನಾಯಕರ ಫತ್ವಾ

ಸ್ವಾಮಿ ವಿವೇಕಾನಂದರ 150ನೇ ಹುಟ್ಟುಹಬ್ಬವಾದ ಗುರುವಾರ ಮಧ್ಯ ಪ್ರದೇಶ ಸರಕಾರವು ರಾಜ್ಯದ ಎಲ್ಲ ಶಾಲೆಗಳಲ್ಲಿ ಮಕ್ಕಳಿಂದ ಸೂರ್ಯ ನಮಸ್ಕಾರ ಮಾಡಿಸಿ ಜಾಗತಿಕ ದಾಖಲೆ ಮಾಡಲು ಸಿದ್ಧತೆ ನಡೆಸಿರುವಂತೆಯೇ ಮುಸ್ಲಿಂ ನಾಯಕರು ಅದನ್ನು ವಿರೋಧಿಸಿ ಫತ್ವಾ ಹೊರಡಿಸಿದ್ದಾರೆ. ಈ ಫತ್ವಾವನ್ನು ನಗರದ ಖಾಜಿ ಸಯ್ಯದ್ ಮುಸ್ತಾಕ್ ಅಲ್ವಿ ನದ್ವಿ ಕೂಡ ದೃಢೀಕರಿಸಿದ್ದಾರೆ.
ಎಲ್ಲ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ನಡೆಸಲು ವ್ಯಾಪಕ ಏರ್ಪಾಟುಗಳನ್ನು ಮಾಡಲಾಗಿದ್ದು ಈ ಸಂದರ್ಭವನ್ನು ಗಿನ್ನೆಸ್ ದಾಖಲೆಗೆ ಸೇರಿಸಬೇಕೆಂಬ ಹಂಬಲವನ್ನು ರಾಜ್ಯ ಶಿಕ್ಷಣ ಮಂಡಳಿ ವ್ಯಕ್ತಪಡಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸರಕಾರಿ ಮತ್ತು ಸರಕಾರದ ಅನುದಾನ ಪಡೆವ ಖಾಸಗಿ ಶಾಲೆಗಳ ಮಕ್ಕಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ.
ಸೂರ್ಯ ನಮಸ್ಕಾರದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಕಡ್ಡಾಯವೇನಲ್ಲ. ಅದು ಅವರವರ ಆಸಕ್ತಿಗೆ ಬಿಟ್ಟ ವಿಚಾರ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಇದೇ ವೇಳೆ ಹೇಳಿಕೆ ನೀಡಿದ್ದಾರೆ.
ಸೂರ್ಯ ನಮಸ್ಕಾರವೆನ್ನುವುದು ಉತ್ತಮ ಆರೋಗ್ಯ ಕಾಪಾಡಿಕೊಂಡು ಬರಲು ನೆರವಾಗುವ ಯೋಗಾಭ್ಯಾಸ ಕ್ರಮ. ಸೂರ್ಯನನ್ನು ನಾವು ಕೇಸರಿ ಅಥವಾ ಹಸಿರು ಎಂದು ವರ್ಗೀಕರಿಸುವುದರಲ್ಲಿ ಅರ್ಥವಿಲ್ಲ ಎಂದು ರಾಜ್ಯ ಶಿಕ್ಷಣ ಸಚಿವ ಅರ್ಚನಾ ಚಿಟ್ನಿಸ್ ಹೇಳಿದರು. ಇಷ್ಟಾಗಿಯೂ 'ಇದು ಶಿಕ್ಷಣವನ್ನು ಕೇಸರೀಕರಣಗೊಳಿಸುವ ಪ್ರಯತ್ನ' ಎಂದು ಅನೇಕ ಮುಸ್ಲಿಂ ನೇತಾರರು ಹೇಳಿಕೆ ನೀಡಿದ್ದಾರೆ.












Click it and Unblock the Notifications