ನಗರಾಭಿವೃದ್ಧಿ ಬಗ್ಗೆ ಯಡಿಯೂರಪ್ಪಗೇಕೆ ಚಿಂತೆ?

ಬೆಂಗಳೂರು ನಗರಾಭಿವೃದ್ಧಿಗೂ ಯಡಿಯೂರಪ್ಪನವರಿಗೂ ಎಲ್ಲಿಂದೆಲ್ಲಿಯ ಸಂಬಂಧ? ಮುಖ್ಯಮಂತ್ರಿ ಆಗಿದ್ದರೆ ಈ ಸಭೆಗೆ ಒಂದು ಅರ್ಥವಿರುತ್ತಿತ್ತು. ಈಗ ಬೆಂಗಳೂರು ಅಭಿವೃದ್ಧಿಯ ಬಗ್ಗೆ ಇವರಿಗೇಕೆ ಕಾಳಜಿ? ನಗರಾಭಿವೃದ್ಧಿಯ ಕುರಿತಂತೆ ಸಭೆ ಕರೆಯಬೇಕಾಗಿದ್ದವರು ಎಸ್ ಸುರೇಶ್ ಕುಮಾರ್ ಅವರಲ್ಲವೆ? ಎಂದು ರಾಜಕೀಯ ಪಂಡಿತರು ಕೇಳುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ ಏನನ್ನುತ್ತಾರೆ?
ಸಭೆಯ ನಂತರ ಪತ್ರಕರ್ತರೊಂದಿಗೆ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಾತನಾಡಿದ ಯಡಿಯೂರಪ್ಪ, ತಮ್ಮ ಮತ್ತು ಈಶ್ವರಪ್ಪ ನಡುವಿನ ವೈಮನಸ್ಯವನ್ನು ತಳ್ಳಿಹಾಕಿ, ನಮ್ಮಿಬ್ಬರಲ್ಲಿ ಎಂತಹ ಭಿನ್ನಾಭಿಪ್ರಾಯವೂ ಇಲ್ಲ, ನಾವಿಬ್ಬರೂ ಸ್ನೇಹಿತರಾಗಿಯೇ ಇದ್ದೇವೆ ಎಂದು, ತಮ್ಮನ್ನು ಮುಖ್ಯಮಂತ್ರಿ ಪಟ್ಟದ ಮೇಲೆ ಕೂಡಿಸಲು ಜ.19ರ ಡೆಡ್‌ಲೈನ್ ನೀಡಿರುವ ಯಡಿಯೂರಪ್ಪ ದೇಶಾವರಿ ನಗೆ ನಕ್ಕಿದ್ದಾರೆ.
ಕೆಲ ದಿನಗಳ ಹಿಂದೆ ಈಶ್ವರಪ್ಪ ವಿರುದ್ಧ ಕೆಂಡಾಮಂಡಲವಾಗಿದ್ದ ಯಡಿಯೂರಪ್ಪ, ತಮ್ಮನ್ನು ಮುಖ್ಯಮಂತ್ರಿ ಪದವಿಯಿಂದ ಇಳಿಸಿ, ಜೈಲಿಗೆ ಕಳುಹಿಸಿದ್ದೇ ಈಶ್ವರಪ್ಪ ಅವರು ಎಂದು ಕೆಂಡ ಕಾರಿದ್ದರು. ಇಂದು ನಾವಿಬ್ಬರೂ ಸ್ನೇಹಿತರು ಹೇಳುವ ಮುಖಾಂತರ ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ ಎಂಬ ವ್ಯಾಖ್ಯಾನವನ್ನು ಮತ್ತೆ ನೆನಪಿಸುವಂತೆ ಮಾಡಿದ್ದಾರೆ. ಯಡಿಯೂರಪ್ಪ ಬಂಡಾಯವೆದ್ದರೆ ಬಿಜೆಪಿ ಜೆಡಿಎಸ್ ಜೊತೆ ಕೈಜೋಡಿಸುವ ಸಂಭವನೀಯತೆ ಕಂಡುಬರುತ್ತಿರುವುದರಿಂದ ಯಡಿಯೂರಪ್ಪ ತಣ್ಣಗಾಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಬಿಜೆಪಿಯಲ್ಲಿ ಒಬ್ಬೊಬ್ಬರು ಒಂದೊಂದು ಘಳಿಗೆ ಒಂದೊಂದು ರೀತಿ ಹೇಳಿಕೆ ನೀಡುತ್ತಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಿಷಯವನ್ನು ಮತ್ತೆ ಬಹಿರಂಗಪಡಿಸಿದೆ. ಈ ನಡುವೆ, ಯಾರ ಬಣವನ್ನೂ ಸೇರದೆ ತಟಸ್ಥರಾಗಿ ಉಳಿದಿದ್ದ ಸುರೇಶ್ ಕುಮಾರ್ ಅವರು ಕೂಡ, ಯಡಿಯೂರಪ್ಪ ಬಿಜೆಪಿಗೆ ನಿರ್ಣಾಯಕ ಎಂದು ಮಂಡ್ಯದಲ್ಲಿ ಹೇಳಿರುವುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಕುಮಾರಸ್ವಾಮಿ ರಾಜೀನಾಮೆ : ಇದೇ ಸಂದರ್ಭದಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದು, ಬಿಜೆಪಿ ನಾಯಕರಿಗೆ ಹೊಸ ತಲೆನೋವು ತಂದಿಟ್ಟಿದ್ದಾರೆ. ತಮ್ಮನ್ನು ಪಕ್ಷ ಅವಗಣಿಸುತ್ತಿರುವುದರಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದು, ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಬೆಂಗಳೂರಿಗೆ ಮರಳಿ ಬಂದನಂತರ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications