ಹೊಸವರ್ಷಾಚರಣೆಗೆ ತಣ್ಣೀರೆರಚಿದ ಥೇನ್ ಬಿರುಗಾಳಿ

Thane cyclone spoils new year party
ಬೆಂಗಳೂರು, ಡಿ. 30 : ವರ್ಷದ ಕೊನೆಯ ಸಂಭ್ರಮಾಚರಣೆಗೆ ಥೇನ್ ಬಿರುಗಾಳಿ ತಣ್ಣೀರು ಎರಚಿದೆ. ಹೊಸ ವರ್ಷ ಮೊದಲ ದಿನ ವಾರಾಂತ್ಯದಲ್ಲಿ ಬಂದಿರುವುದರಿಂದ ಪ್ರವಾಸ ಕೈಗೊಳ್ಳುವ ಯೋಜನೆ ಹಾಕಿಕೊಂಡಿದ್ದವರೆಲ್ಲ 'ಥೂ ಈ ವೆದರಲ್ಲಿ ಯಾರು ಪ್ರವಾಸ ಹೋಗ್ತಾರೆ' ಅಂತ ಮನೆಯಲ್ಲಿಯೇ ಬೆಚ್ಚಗೆ ಸಂಭ್ರಮಿಸಲು ಚಿಂತಿಸುವಂತಾಗಿದೆ.

ಸಿಲಿಕಾನ್ ವ್ಯಾಲಿಯಲ್ಲಿನ ಐಟಿ ಪಂಡಿತರೆಲ್ಲ ವರ್ಷಾಂತ್ಯದ ಪಾರ್ಟಿ, ಪ್ರವಾಸ, ಟ್ರೆಕ್ಕಿಂಗು ಅಂತ ಚಿಂತಿಸುವ ಬದಲು ಹವಾಮಾನ ಇಲಾಖೆ ಈಗ ಏನು ಹೇಳುತ್ತಿದೆ ಎಂದು ಕಾದು ಕುಳಿತುಕೊಳ್ಳುವಂತಾಗಿದೆ. ಬೆಂಗಳೂರಿನಲ್ಲಂತೂ ಡಿ.30ರ ಬೆಳ್ಳಂಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಶುರುವಾಗಿ ತಲೆ ಚಿಟ್ಟುಹಿಡಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಬೀಸಿರುವ ಭೀಕರ ಚಂಡಮಾರುತ ತಮಿಳುನಾಡಿನಲ್ಲಿ ಸಾಕಷ್ಟು ಹಾವಳಿ ಎಬ್ಬಿಸಿದೆ. ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಚಂಡಮಾರುತ ಕರಾವಳಿ ಪ್ರದೇಶದಲ್ಲಿ ಭಾರೀ ಹಾನಿ ಉಂಟುಮಾಡಿದ್ದು ಶುಕ್ರವಾರ 4 ಜನ ಅಸುನೀಗಿದ್ದಾರೆ. ಥೇನ್ ಬಿರುಗಾಳಿಯ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಜಿಲ್ಲೆಗಳ ಮೇಲೆ ಆಗುತ್ತಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆಯಾಗುವ ಸಂಭವನೀಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇನ್ನೂ ಎರಡು ದಿನಗಳ ಕಾಲ ಇರಲಿದ್ದು, ಅಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

ಬಾರುಗಳು 1 ಗಂಟೆಯ ವರೆಗೆ ಮಾತ್ರ :
ಬಂಧು ಸ್ನೇಹಿತರೊಡಗೂಡಿ ಪಬ್, ಬಾರುಗಳಲ್ಲಿ ಹೊಸವರ್ಷ ಆಚರಿಸುವ ಪಾರ್ಟಿ ಪ್ರಾಣಿಗಳಿಗೆ ಅಬಕಾರಿ ಸಚಿವ ರೇಣುಕಾಚಾರ್ಯ ಈ ಬಾರಿ ನಿರಾಶೆ ಮೂಡಿಸಿದ್ದಾರೆ. ಡಿ.31ರ ರಾತ್ರಿ 1 ಗಂಟೆಯವರೆಗೆ ಮಾತ್ರ ಬಾರುಗಳು ತೆರೆದಿರಬೇಕು ಎಂದು ರೇಣುಕಾಚಾರ್ಯ ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದ್ದಾರೆ.

ಜೊತೆಗೆ ಗಲ್ಲಿಗಲ್ಲಿಗಳಲ್ಲಿಯೂ ಕುಡಿದು ಓಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಸನ್ನದ್ಧವಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಖಡಕ್ ಮಾತು ಆಡಿದ್ದಾರೆ. ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಯಾವುದೇ ಗಲಾಟೆ ನಡೆಯಲು ಅವಕಾಶ ನೀಡದಂತೆ ಭಾರೀ ಬಂದೋಬಸ್ತ್ ಮಾಡಲಾಗುವುದು ಎಂದಿದ್ದಾರೆ.

ಕುಡಿದು ಓಡಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಎಚ್ಚರಿಸುವ ಉದ್ದೇಶದಿಂದ ಭಾರತೀಯ ಮನೋಶಾಸ್ತ್ರಜ್ಞರ ಸಂಘ ನಗರದಲ್ಲಿ ಜಾಥಾ ಆಯೋಜಿಸಿತ್ತು. ಅದರಲ್ಲಿ ನಗರಾಭಿವೃದ್ಧಿ ಸಚಿವ ಎಸ್ ಸುರೇಶ್ ಕುಮಾರ್ ಕೂಡ ಭಾಗವಹಿಸಿದ್ದರು. ಗುಂಡು ಹಾಕಿ ಅನಾಹುತ ಮಾಡಿಕೊಳ್ಳುವ ಬದಲು ಸುರಕ್ಷಿತವಾಗಿ ಹೊಸ ವರ್ಷ ಆಚರಿಸಿ ಎಂಬ ಕರೆ ನೀಡಿದ್ದಾರೆ.

ಓದುಗರ ಅಭಿಮತ : ನಮ್ಮ ಓದುಗರಿಗೆ 'ನಿಮ್ಮ ಹೊಸ ವರ್ಷದ ಸಂಭ್ರಮಾಚರಣೆ ಎಲ್ಲಿ?' ಎಂಬ ಪ್ರಶ್ನೆಗೆ ಬೆಟ್ಟಗುಡ್ಡ ಅಡ್ಡಾಡುವುದು, ತೀರ್ಥಯಾತ್ರೆ ಕೈಗೊಳ್ಳುವುದು, ಬೀಚ್ ಬಾರಲ್ಲಿ ಮೋಜುಮಸ್ತಿ ಮಾಡುವುದು ಬಿಟ್ಟು ಆರಾಮವಾಗಿ ಮನೆಮಂದಿಯೊಂದಿಗೆ ಮನೆಯಲ್ಲಿಯೇ ಕಾಲಕಳೆಯುವುದಾಗಿ ಮತಚಲಾಯಿಸಿದ್ದಾರೆ. ಈ ಥಂಡಿಯಲ್ಲಿ ನಾನಾ ಕಸಾರಿಕೆಗಳನ್ನು ಬರಿಸಿಕೊಳ್ಳುವ ಬದಲು ಮನೆಯಲ್ಲಿಯೇ ಇದ್ದು ಹೊಸವರ್ಷ ಆಚರಿಸುವುದು ಜಾಣರ ಲಕ್ಷಣ ಅಲ್ಲವೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+