‘ಸಾಮಾಜಿಕ ವೈಷಮ್ಯ’ ಸಾರುವ ಭಗವದ್ಗೀತೆ ನಿಷೇಧಕ್ಕೆ ಹುನ್ನಾರ

ರಷ್ಯಾದಲ್ಲಿ ಭಗವದ್ಗೀತೆ ನ್ಯಾಯಾಂಗ ನಿಷೇಧವನ್ನು ಎದುರಿಸುವ ಸಾಧ್ಯತೆಯಿದ್ದು, ಭಗವದ್ಗೀತೆ ಗ್ರಂಥವೊಂದಕ್ಕೆ 'ಉಗ್ರಗಾಮಿ ಸಾಹಿತ್ಯ" ಅಥವಾ 'ಪ್ರತ್ಯೇಕತಾವಾದಿ' ಎಂಬ ಹಣೆಪಟ್ಟಿ ಕಟ್ಟುವ ಹುನ್ನಾರ ನಡೆದಿದೆ. ಇಸ್ಕಾನ್‌ನ ಸ್ಥಾಪಕ ಎ.ಸಿ. ಭಕ್ತಿ ವೇದಾಂತ ಸ್ವಾಮಿ ರಷ್ಯಾ ಭಾಷೆಗೆ ತರ್ಜುಮೆ ಮಾಡಿರುವ 'ಭಗವದ್ಗೀತೆ - ಅದು ಇರುವಂತೆ" ಎಂಬ ಕೃತಿಯನ್ನು ನಿಷೇಧಿಸುವಂತೆ ಕಳೆದ ಜೂನ್‌ನಿಂದ ಟೋಂಸ್ಕಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.
ತತ್ಸಂಬಂಧ ಸೈಬೀರಿಯದ ತೋಮ್ಸ್ ಕ್ ನಗರದ ನ್ಯಾಯಾಲಯವೊಂದು ಸೋಮವಾರ ತನ್ನ ತೀರ್ಪು ನೀಡಲಿದೆ. ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಡಿ. 15ರಿಂದ 17ರ ವರೆಗೆ ರಷ್ಯಾಕ್ಕೆ ಭೇಟಿ ನೀಡಿ, ಅಲ್ಲಿನ ಅಧ್ಯಕ್ಷ ಡಿಮಿತ್ರಿ ಮೆಡ್ವೆಡೆವ್‌ರೊಂದಿಗೆ ನಡೆಸಿದ ದ್ವಿಪಕ್ಷೀಯ ಮಾತುಕತೆಯಲ್ಲಿ ದ್ವಿಪಕ್ಷೀಯ ವ್ಯಾಪಾರ, ರಕ್ಷಣಾ ಸಹಭಾಗಿತ್ವ ಹಾಗೂ ವೈಯಕ್ತಿಕ ಸ್ನೇಹಗಳನ್ನು ಬಲಪಡಿಸಿದ ಎರಡೇ ದಿನಗಳಲ್ಲಿ ಭಗವದ್ಗೀತೆಯ ಕುರಿತಾದ ಅಂತಿಮ ತೀರ್ಪು ಹೊರ ಬೀಳಲಿದೆ.
ರಷ್ಯಾದಲ್ಲಿ ಭಗವದ್ಗೀತೆಯನ್ನು ನಿಷೇಧಿಸಬೇಕು. ಅದನ್ನು 'ಸಾಮಾಜಿಕ ವೈಷಮ್ಯ" ಉಂಟುಮಾಡುವ ಸಾಹಿತ್ಯವೆಂದು ಘೋಷಿಸಬೇಕು. ಹಾಗೂ ರಷ್ಯಾದ ನೆಲದಲ್ಲಿ ಅದರ ವಿತರಣೆಯನ್ನು ಕಾನೂನು ಬಾಹಿರವೆಂದು ಪರಿಗಣಿಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದಾರೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಮಾಸ್ಕೋದಲ್ಲಿ ನೆಲೆಸಿರುವ ಸುಮಾರು 15 ಸಾವಿರದಷ್ಟು ಇಸ್ಕಾನ್ ಪಂಥದ ಅನುಯಾಯಿಗಳಾಗಿರುವ ಭಾರತೀಯರು, ಭಗವದ್ಗೀತೆಯ ಕುರಿತಾದ ವಿವಾದವನ್ನು ಪರಿಹರಿಸಲು ರಾಜತಾಂತ್ರಿಕವಾಗಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications