ಕೊಲ್ಹಾಪುರದಲ್ಲಿ 5 ಕರ್ನಾಟಕ ಬಸ್ಸುಗಳಿಗೆ ಕಲ್ಲೇಟು

ಮಹಾರಾಷ್ಟ್ರ ನವನಿರ್ಮಾಣ ಸೇನೆ ಮಹಾರಾಷ್ಟ್ರ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದೆ. ಕನ್ನಡಿಗರು ಹೆಚ್ಚಾಗಿರುವ ಕೊಲ್ಹಾಪುರದಲ್ಲಿ ಕರ್ನಾಟಕದ 5 ಸರಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ತೂರಾಟದಲ್ಲಿ ಬಸ್ಸುಗಳು ಜಖಂ ಆಗಿವೆಯಾದರೂ ಯಾರೂ ಗಾಯಗೊಂಡ ವರದಿ ಬಂದಿಲ್ಲ.
ಕನ್ನಡಿಗರನ್ನು ಕಡೆಗಣಿಸಿ, ಕನ್ನಡ ನಾಡು ನುಡಿಗೆ ಅವಮಾನ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ ಅಧಿಕಾರದಲ್ಲಿದ್ದ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಕರ್ನಾಟಕ ಗುರುವಾರ ಚಳಿಗಾಲದ ಅಧಿವೇಶನದಲ್ಲಿ ನಿರ್ಧರಿಸಿತು. ಇದರಿಂದ ಕನ್ನಡ ಮರಾಠಿ ಭಾಷಾ ಕಲಹ ಮತ್ತೆ ತಾರಕ್ಕೇರಿದೆ.
ಈ ನಿರ್ಧಾರದಿಂದ ಅಸಮಾಧಾನಗೊಂಡಿರುವ ಎಂಇಎಸ್ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಏಕರೂಪ್ ಕೌರ್ ಅವರನ್ನು ಭೇಟಿ ಮಾಡಿ, ಕರ್ನಾಟಕದಲ್ಲಿ ಆಪತ್ತಿನಲ್ಲಿರುವ ಮರಾಠಿಗರನ್ನು ರಕ್ಷಿಸಬೇಕು ಎಂದು ಕೋರಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.












Click it and Unblock the Notifications