ವಿದ್ಯಾರ್ಥಿಗಳಿಗೆ 4 ತುತ್ತು ಹಾಕದ ಮತಿಗೇಡಿ ಸರಕಾರ

ಗಡಿನಾಡು ಯಾದಗಿರಿ ಜಿಲ್ಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಹಳ್ಳ ಹಿಡಿದಿದೆ. ಸರ್ಕಾರ ಪ್ರೌಢ ಶಾಲೆ ವಿದ್ಯಾರ್ಥಿಗಳಿಗಾಗಿ ಅಕ್ಷರ ದಾಸೋಹ ಯೋಜನೆ ಜಾರಿಗೆ ತಂದು 5 ವರ್ಷ ಗತಿಸಿದ್ರೂ ಬೆನಕನಹಳ್ಳಿ ಗ್ರಾಮದ ಪ್ರೌಢ ಶಾಲೆಯಲ್ಲಿ 4 ವರ್ಷದಿಂದ ಅಕ್ಷರ ದಾಸೋಹ ಯೋಜನೆ ಜಾರಿಯಾಗಿಲ್ಲ.
ಪ್ರಾಥಮಿಕ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಅಕ್ಷರ ದಾಸೋಹ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಜೂನ್ 14, 2007ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೂ ವಿಸ್ತರಿಸಿ ರಾಮನಗರ ಪ್ರೌಢಶಾಲೆಯೊಂದರಲ್ಲಿ ಉದ್ಘಾಟಿಸಿದ್ದರು.
ಬಡ ವಿದ್ಯಾರ್ಥಿಗಳು ಶಾಲೆ ಮಧ್ಯದಲ್ಲಿ ತೊರೆಯುವುದನ್ನು ತಪ್ಪಿಸಲು ಮತ್ತು ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಉತ್ತಮಪಡಿಸಲು ಜಾರಿಗೆ ತಂದ ಅಕ್ಷರ ದಾಸೋಹ(ಬಿಸಿ ಊಟ) ಯೋಜನೆ ಈ ಹಳ್ಳಿಯ ವಿದ್ಯಾರ್ಥಿಗಳಿಗೆ ತಲುಪುತ್ತಲೇ ಇಲ್ಲ. ಈ ಶಾಲೆಯಲ್ಲಿ 230 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೆನಕನಹಳ್ಳಿ ಈ ಪ್ರೌಢ ಶಾಲೆಗೆ ಸುತ್ತಲಿನ 5 ಕಿಮೀ ದೂರದ ಸಿದ್ದಾಪೂರ, ಹೆಬ್ಬಾಳ್ ಮತ್ತು ಕೊನಾಳ್ ಗ್ರಾಮದಿಂದ ವಿದ್ಯಾರ್ಥಿಗಳು ಸೈಕಲ್ ಮೇಲೆ ಶಾಲೆಗೆ ಬರುತ್ತಾರೆ.
ಬಿಸಿ ಊಟ ಅಡುಗೆ ಮಾಡಲು ಸಿಬ್ಬಂದಿಗಳು ಸಿಗುತ್ತಿಲ್ಲವಂತೆ. ಗಂಡ ಮತ್ತು ಹೆಂಡತಿಯ ನಡುವಿನ ಕಿತ್ತಾಟದಲ್ಲಿ ಕೂಸು ಬಡವಾಯಿತೆಂಬಂತೆ, ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಜನರ ಕಚ್ಚಾಟದಲ್ಲಿ ವಿದ್ಯಾರ್ಥಿಗಳು ಹಸಿವಿನಿಂದ ಬಳಲುತ್ತಿದ್ದಾರೆ. ಸುರಪುರ ತಾಲೂಕಿನವರೆ ಆದ ಜಿಲ್ಲಾ ಉಸ್ತುವಾರಿ ಸಚಿವ ರಾಜೂಗೌಡರಾದ್ರೂ ಬೆನಕನಹಳ್ಳಿ ಪ್ರೌಢಶಾಲೆಯತ್ತ ಗಮನ ಹರಿಸಲಿ ಎಂದು ಪಾಲಕರು ಆಗ್ರಹಿಸಿದ್ದಾರೆ.












Click it and Unblock the Notifications