ಬಳ್ಳಾರಿ ಗ್ರಾಮೀಣ : ಶೇ.70ರಷ್ಟು ಶಾಂತಿಯುತ ಮತದಾನ

ಎರಡೂವರೆ ಸಾವಿರ ಭದ್ರತಾ ಸಿಬ್ಬಂದಿಗಳ ಕಟ್ಟೆಚ್ಚರದಲ್ಲಿ ಅತ್ಯಂತ ಶಾಂತಿಯುತವಾಗಿ ಮತದಾನ ನಡೆಯಿತು. ಆರಂಭದಲ್ಲಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದರೂ ಸಂಜೆಯ ವೇಳೆಗೆ ಮತದಾನ ಭರದಿಂದ ಮತ್ತು ಉತ್ಸಾಹದಿಂದ ಸಾಗಿತು.
ಒಟ್ಟು 195 ಮತಗಟ್ಟೆಗಳಲ್ಲಿ 133 ಅತಿಸೂಕ್ಷ್ಮ ಮತ್ತು 52 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿತ್ತು. ಈ ಮತಗಟ್ಟೆಗಳಲ್ಲಿ ಭಾರೀ ಬಿಗಿಭದ್ರತೆ ಒದಗಿಸಲಾಗಿತ್ತು. ಎಲ್ಲೂ ಅಹಿತಕರ ಘಟನೆಗಳು ನಡೆಯದೆ ಯೋಜಿಸಿದಂತೆ ಮತಚಲಾವಣೆ ನಡೆಯಿತು.
ಸ್ವತಃ ಚುನಾವಣೆಗೆ ನಿಂತಿರುವ ಬಿ. ಶ್ರೀರಾಮುಲು ಮತ್ತು ಕಾಂಗ್ರೆಸ್ ಅಭ್ಯರ್ಥಿ ಬಿ. ರಾಮ್ ಪ್ರಸಾದ್ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಇಬ್ಬರೂ ಬಳ್ಳಾರಿ ನಗರದ ವಾಸಿಗಳಾದ್ದರಿಂದ ಅವರಿಬ್ಬರ ಹೆಸರು ಮತಪಟ್ಟಿಯಲ್ಲಿ ಇರಲಿಲ್ಲ.
ಈ ಬಾರಿ ಬೆರಳೆಣಿಕೆಯ ಶಾಸಕರ ಬೆಂಬಲದಿಂದ ಶ್ರೀರಾಮುಲು ಪ್ರಚಾರ ಕೈಗೊಂಡಿದ್ದರೆ, ಬಿಜೆಪಿ ಮಾಜಿ ಮುಖ್ಯಮಂತ್ರಿ, ಹಾಲಿ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ, ಚಿತ್ರನಟಿಯರ ಮುಖಾಂತರ ಭರ್ಜರಿ ಪ್ರಚಾರ ಮಾಡಿತ್ತು. ಪ್ರಚಾರದ ಕೊನೆಯ ದಿನ ನಟಿ ಹೇಮಾಮಾಲಿನಿ ಬಿಜೆಪಿ ಪರ ಮತ ಯಾಚಿಸಿದ್ದರು.
ಬಿಜೆಪಿಯಿಂದ ತಿರಸ್ಕೃತರಾಗಿ ಪಕ್ಷೇತರರಾಗಿ ಸ್ಪರ್ಧಿಸಿರುವ ಶ್ರೀರಾಮುಲು, ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ಮತ್ತು ಕಾಂಗ್ರೆಸ್ ನ ಬಿ ರಾಮ್ ಪ್ರಸಾದ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಇವರ ಹಣೆಬರಹವನ್ನು ಮತದಾರರು ನಿರ್ಧರಿಸಿಯಾಗಿದೆ. ಫಲಿತಾಂಶ ಡಿ.4, ಭಾನುವಾರದಂದು ದೊರೆಯಲಿದೆ.











Click it and Unblock the Notifications