ಜನಾ ರೆಡ್ಡಿಗೆ ಕೆರೆ, ಜಮೀನು. ಕೃಪೆ : ವೈಎಸ್‌ಆರ್

ಹೈದರಾಬಾದ್ ಹೊರವಲಯದಲ್ಲಿ ರಂಗಾರೆಡ್ಡಿ ಜಿಲ್ಲೆ ವ್ಯಾಫ್ತಿಯಲ್ಲಿರುವ ಷಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ದುಗ್ಗಾ ಚೆರ್ಲಾ ಗ್ರಾಮ ವ್ಯಾಪ್ತಿ 10 ಎಕರೆ ಕೆರೆಯನ್ನು ಅಕ್ರಮಿಸಿಕೊಂಡಿರುವುದರ ಜತೆಗೆ ಅದರ ಪಕ್ಕದಲ್ಲಿದ್ದ 50 ರೈತರ 140 ಎಕರೆ ನೀರಾವರಿ ಜಮೀನನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿದ್ದ ಜನಾರ್ದನ ರೆಡ್ಡಿ ಬ್ರಹ್ಮಿಣಿ ಕಂಪನಿಯ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ.
ಈ ಜಮೀನನ್ನು ಕೊಡಲು ಒಪ್ಪದ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ್ದು ರಾಜಶೇಖರ ರೆಡ್ಡಿ ನೇತೃತ್ವದ ಸರ್ಕಾರ. 2004ರಲ್ಲಿ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಮಾಡಿದ ಸಹಾಯಕ್ಕೆ ರಾಜಶೇಖರ ರೆಡ್ಡಿ ನೀಡಿದ ಮೊದಲ ಕಿರುಕಾಣಿಕೆ ಇದಾಗಿದೆ ಎಂಬ ಮಾಹಿತಿ ಸಿಬಿಐಗೆ ಲಭ್ಯವಾಗಿದೆ.
ದುಗ್ಗಾ ಚೆರ್ಲಾ ಗ್ರಾಮದ ವ್ಯಾಪ್ತಿಯ 140 ಎಕರೆ ಜಮೀನಿನಲ್ಲಿ ಮೊದಲು ಬ್ರಹ್ಮಿಣಿ ಅವಿನ್ಯೂಸ್ ಹೆಸರಿನಲ್ಲಿ ವಿಲ್ಲಾ ಪ್ಲಾಟ್‌ಗಳನ್ನು ನಿರ್ಮಿಸಿ, ತಲಾ ಸುಮಾರು 2 ಕೋಟಿ ರೂ.ಗೆ ಮಾರಾಟ ಮಾಡಲಾಗಿತ್ತು. ಈ ಅವಿನ್ಯೂನಲ್ಲೇ ಜನಾರ್ದನ ರೆಡ್ಡಿ ಹೆಲಿಪ್ಯಾಡ್ ಸೇರಿದಂತೆ ಐಷಾರಾಮಿ ಸೌಲಭ್ಯ ಇರುವ ಒಂದು ಎಕರೆ ಭವ್ಯ ಬಂಗಲೆ ನಿರ್ಮಿಸಿಕೊಂಡಿದ್ದಾರೆ.
ಬ್ರಹ್ಮಿಣಿ ಅವಿನ್ಯೂ ಪಕ್ಕದಲ್ಲಿದ್ದ ಕೆರೆಯ 10 ಎಕರೆ ಜಾಗವನ್ನು ರೆಡ್ಡಿ ಬಳಗ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ಒಂದು ವಾರದ ಹಿಂದೆ ನೋಟಿಸ್ ಜಾರಿ ಮಾಡಿ, ಕೆರೆ ತೆರವಿಗೆ ಮುಂದಾಗಿದೆ. ಇದರ ಬಗ್ಗೆ ಸಿಬಿಐಗೂ ಮಾಹಿತಿ ನೀಡಲಾಗಿದೆ.












Click it and Unblock the Notifications