ಗಡಗಡ ನಡುಗುತಿದೆ ಬೆಂಗಳೂರು, ಕುದಿಯುತ್ತಿದೆ ಬಳ್ಳಾರಿ

ಇದ್ದಕ್ಕಿದ್ದಂತೆ ಬದಲಾದ ಈ ವಾತಾರವಣಕ್ಕೆ ಕಾರಣ ಚೆನ್ನೈನಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಭಾರೀ ಮಳೆ ಸುರಿಯುತ್ತಿರುವುದು. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದ ಕಾರಣ ತಮಿಳುನಾಡಿನಾದ್ಯಂತ ಮಳೆ ಹುಯ್ಯುತ್ತಿದೆ. ಇದರ ಪರಿಣಾಮ ಬೆಂಗಳೂರಿನ ಮೇಲೆಯೂ ಆಗಿದೆ.
ಇಂದು ಸೂರ್ಯನನ್ನು ದಟ್ಟ ಮೋಡಗಳು ಸಂಪೂರ್ಣ ಆವರಿಸಿಕೊಂಡಿವೆ. ಹಗಲು ಹೊತ್ತಿನಲ್ಲಿ 28ರಿಂದ 30 ಡಿಗ್ರಿ ಸೆಲ್ಶಿಯಸ್ ಇರುತ್ತಿದ್ದ ಗರಿಷ್ಠ ತಾಪಮಾನ ಇಂದು 25 ಡಿಗ್ರಿಗೆ ಜಾರಿದೆ. ರಾತ್ರಿ ಹೊತ್ತಿನಲ್ಲಿ 17 ಡಿಗ್ರಿಗೆ ಇಳಿಯಲಿದೆ. ಇದೇ ಪರಿಸ್ಥಿತಿ ಮುಂದಿನ ಐದು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂಥ ಸಂದರ್ಭದಲ್ಲಿಯೇ ಹಾಳು ಕೆಮ್ಮು, ನೆಗಡಿ, ಜ್ವರಗಳು ಬಂದು ವಕ್ಕರಿಸುತ್ತವೆ. ಶಾಲೆಗೆ ಹೋಗುವ ಮಕ್ಕಳನ್ನು ಸಾಧ್ಯವಾದಷ್ಟು ಬೆಚ್ಚಗೆ ಕಳಿಸಿಕೊಡುವುದು ದೊಡ್ಡವರ ಜವಾಬ್ದಾರಿ. ಐಸ್ ಕ್ರೀಮ್, ತಳ್ಳುವ ಗಾಡಿಗಳಲ್ಲಿನ ಪಾನಿ ಪೂರಿ ಮುಂತಾದ ತಿಂಡಿಗಳನ್ನು ತಿನ್ನದಿರುವುದೇ ಕ್ಷೇಮ. ಮನೆಯಲ್ಲೇ ಬಿಸಿ ಆಹಾರ ತಯಾರಿಸಿ ಊಟ ಮಾಡುವುದು ಒಳಿತು. [ಬೆಚ್ಚನೆಯ ಮೈಗೆ ಫ್ಯಾಷನೇಬಲ್ ಜಾಕೆಟ್]
ಬಳ್ಳಾರಿಯಲ್ಲಿ ಏರುತ್ತಿರುವ ಕಾವು : ಬಳ್ಳಾರಿ ಮಾತ್ರ ವಿಭಿನ್ನವಾದ ವಾತಾವರಣವನ್ನು ಕಾಣುತ್ತಿದೆ. ಬೆಳಿಗ್ಗೆ 10ರವರೆಗೆ ಬೆಂಗಳೂರು ಕೂಡ ಕಂಡಿರದಂಥ ಥಂಡಿಗೆ ಗಡಗಡ ನಡುಗಿದರೆ, ಸೂರ್ಯ ನೆತ್ತಿಗೆ ಬರುತ್ತಿದ್ದಂತೆ ಮೊಟ್ಟೆ ಒಡೆದು ಆಮ್ಲೇಟ್ ಮಾಡುವಂಥ ಕಾವು.
ಜೊತೆಗೆ ಮತಗಳನ್ನು ಕೇಳಲು ಬರುತ್ತಿರುವ ಧುರೀಣರು ಮತ್ತು ಕಾರ್ಯಕರ್ತರು ಎಬ್ಬಿಸುವ ಧೂಳು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತಿದೆ. ಬಳ್ಳಾರಿ ಬಿಸಿಲಿನ ಝಳಕ್ಕೆ ಚುನಾವಣೆಯ ಕಾವು ಪೈಪೋಟಿ ನೀಡುತ್ತಿರುವಂತಿದೆ.












Click it and Unblock the Notifications