ಬಿದರಿ ವಿರುದ್ಧ ನಗಾರಿ ಬಾರಿಸಿದ ಎಚ್.ಡಿ.ಕುಮಾರಸ್ವಾಮಿ

ಯಾರದ್ದೊ ಹಿತಾಸಕ್ತಿ ಕಾಪಾಡುವುದಕ್ಕಾಗಿ ಸಿಓಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಈ ಕುರಿತು ಎಫ್‌ಐಆರ್ ದಾಖಲಿಸಿರುವ ಅಧಿಕಾರಿಗಳ ಸತ್ಯಾಂಶವನ್ನು ಮುಂದಿನ ದಿನಗಳಲ್ಲಿ ಬಯಲಿಗೆಳೆಯುವುದಾಗಿ ಗುಡುಗಿದರು.
ದಾಖಲಾಗಿರುವ ದೂರುನಲ್ಲಿ ಸ್ಪಷ್ಟವಾದ ಹೆಸರು ಸೂಚಿಸಿಲ್ಲ. ಆದರೆ ಮುಂದೆ ಹೆಸರನ್ನು ಬೇಕಾದ ರೀತಿಯಲ್ಲಿ ಸೇರಿಸಿಕೊಳ್ಳುತ್ತಾರೆ. ಈ ರೀತಿ ಯಾರದ್ದೋ ಚಿತಾವಣೆ ಮೇರೆಗೆ, ದ್ವೇಷಕ್ಕಾಗಿ ದೇವೇಗೌಡರ ಮೇಲೆ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡು ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುತ್ತಿರುವ ಸಿಐಡಿ ಅಧಿಕಾರಿಗಳ ಬಣ್ಣವನ್ನು ಸದ್ಯದಲ್ಲೇ ಬಯಲಿಗೆಳೆಯುತ್ತೇನೆ ಎಂದು ಮಾರುತ್ತರ ನಿಡಿದ್ದಾರೆ.
ರಾಜ್ಯದಲ್ಲಿ ಸಿಐಡಿ ಅಧಿಕಾರಿಗಳು ಯಾರ ಮರ್ಜಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರ ಹಿನ್ನೆಲೆ ಏನು ಎಂಬುದರ ಸಮಗ್ರ ಮಾಹಿತಿಯನ್ನು ಜನರ ಮುಂದಿಡುವುದಾಗಿ ಪರೋಕ್ಷವಾಗಿ ಸಿಐಡಿ ಡಿಜಿ ಶಂಕರ್ ಬಿದರಿ ವಿರುದ್ಧ ಹರಿಹಾಯ್ದರು.
1995ರ ಪ್ರಕರಣದ ಬಗ್ಗೆ ತನಿಖೆ ನಡೆಸಲು ರಚಿಸಿದ್ದ ಸದನ ಸಮಿತಿ ವರದಿಯನ್ನು ಎರಡು ಬಾರಿ ಸಚಿವ ಸಂಪುಟದಲ್ಲಿ ಚರ್ಚಿಸಿ ಪ್ರಕರಣ ಕೈ ಬಿಟ್ಟ ನಂತರವೂ ಮತ್ತೆ ಸಿಐಡಿ ತನಿಖೆಗೆ ವಹಿಸಿ ಇದೀಗ ಎಫ್ಐಆರ್ ದಾಖಲಿಸಲಾಗಿದೆ. ರಾಜಕೀಯ ಸಣ್ಣತನ, ದ್ವೇಷ ಇದರ ಹಿಂದಿದೆ ಎಂದು ದೂರಿದರು.
ಯಾರೋ ಒಬ್ಬರು ಅರ್ಜಿ ಗುಜರಾಯಿಸುವುದು. ಆ ಅರ್ಜಿ ಆಧಾರದ ಮೇಲೆ ಬೇಕಂತಲೇ ತನಿಖೆ ನಡೆಸುವುದು. ಆ ನಂತರ ಎಫ್ಐಆರ್ ದಾಖಲಿಸುವುದು ನಡೆದಿದೆ. ಎಲ್ಲದಕ್ಕೂ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡಲಾಗುವುದು ಎಂದರು.












Click it and Unblock the Notifications