ಈಬಾರಿ ಬಳ್ಳಾರಿಯಲ್ಲೇ ಸಿಬಿಐ ಅಧಿಕಾರಿಗಳ ದಸರಾ

ಬಳ್ಳಾರಿ ಜಿಲ್ಲೆಯ ಅತ್ಯಂತ ವಿವಾದಿತ ಗಣಿಗಳಲ್ಲಿ ಒಂದಾಗಿರುವ ಹೊಸಪೇಟೆಯ ವ್ಯಾಸನಕೇರಿ ವ್ಯಾಪ್ತಿಯ ವಿ. ನಾಗಪ್ಪ ಮೈನ್ಸ್‌ನ ಕಂಪನಿ ಮತ್ತು ಮನೆಯ ಮೇಲೆ ಸಿಬಿಐ ಅಧಿಕಾರಿಗಳು ನಡೆಸಿದ್ದಾರೆ. ಕಪ್ಪಗಲ್ ರಸ್ತೆಯಲ್ಲಿರುವ ವಿ.ನಾಗಪ್ಪ ಮೈನ್ಸ್‌ನ ಗುತ್ತಿಗೆದಾರರಾದ ಶಾಂತಲಕ್ಷ್ಮಿ ವಿ. ಜಯರಾಂ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ಶಾಂತಲಕ್ಷ್ಮಿ ಅವರ ಪತಿ ವಿ. ಜಯರಾಂ ಅವರ ಗಣಿ ವಿವಾದ ತೀವ್ರಗೊಂಡಾಗ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.
ವಿ. ಜಯರಾಂ ಅವರ ತಂದೆ ವಡ್ಡೆ ನಾಗಪ್ಪ ಅಲಿಯಾಸ್ ವಿ. ನಾಗಪ್ಪ ಅನಕ್ಷರಾಗಿದ್ದರೂ ಎರಡು ಬಾರಿ ಬಳ್ಳಾರಿ ನಗರದ ಶಾಸಕರಾಗಿ, ಕೂಡ್ಲಿಗಿಯಿಂದ ಒಮ್ಮೆ ಶಾಸಕರಾಗಿ ಆಯ್ಕೆ ಆಗಿದ್ದರು. ಇವರು ಸ್ವತಂತ್ರಪಕ್ಷ ಮತ್ತು ಕಾಂಗ್ರೆಸ್ (ಓ) ಪಕ್ಷವನ್ನು ಪ್ರತಿನಿಧಿಸುತ್ತಿದ್ದರು.
ಗಣಿ ಮಾಲಿಕರ ಎದೆಯಲ್ಲಿ ನಡುಕ : ಸಿಬಿಐ ಅಧಿಕಾರಿಗಳು ಇನ್ನೂ 5ರಿಂದ 7 ಗಣಿ ಗುತ್ತಿಗೆದಾರರು, ಸಾರಿಗೆ ಗುತ್ತಿಗೆದಾರರು ಮತ್ತು ಟ್ರೇಡರ್‌ಗಳ ಮನೆ - ಕಚೇರಿಗಳ ಮೇಲೆ ಮಂಗಳವಾರ ದಾಳಿ ನಡೆಸುವ ಸಾಧ್ಯತೆಗಳಿವೆ. ಜೆಎಸ್‌ಡಬ್ಲ್ಯು ಜಿಂದಾಲ್ ಕಂಪನಿಯ ಗ್ಲಾಸ್‌ಹೌಸ್ ಮತ್ತು ಆಡಳಿತ ವಿಭಾಗದಲ್ಲಿ ಸೋಮವಾರ ದಾಳಿ ಮಾಡಿದ್ದ 25 - 30 ಸದಸ್ಯರ ತಂಡ, ಮಂಗಳವಾರ ಬೆಳಿಗ್ಗೆ ಕೂಡ ದಾಳಿ ಮುಂದುವರೆಸಿದೆ.
ಎಎಂಸಿಯಿಂದ ಭಾರೀ ಪ್ರಮಾಣದ ಅಕ್ರಮ - ಅನಧಿಕೃತವಾದ ಕಬ್ಬಿಣದ ಅದಿರನ್ನು ಜಿಂದಾಲ್ ಖರೀದಿ ಮಾಡಿರುವ ಕುರಿತು ಲೋಕಾಯುಕ್ತ ವರದಿಯಲ್ಲಿ ಮಾಹಿತಿ ಇದೆ. ಅಲ್ಲದೇ, ಕಳೆದ ಶನಿವಾರ ಲೋಕಾಯುಕ್ತರ 13 ಸದಸ್ಯರ ತಂಡ ಕೂಡ ದಾಳಿ ನಡೆಸಿ ಅನೇಕ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ದಾಳಿಗೆ ಸಾಕಷ್ಟು ಮಹತ್ವ ಬಂದಿದೆ.












Click it and Unblock the Notifications