ಸಿಬಿಐ ಮುಂದೆ ಮಂಡಿಯೂರಿದ ರೆಡ್ಡಿ ಬಂಟ ಸ್ವಸ್ತಿಕ್

ಜನಾರ್ದನ ರೆಡ್ಡಿ ಬಂಧನ ನಂತರ ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಅವರು ಹೊಸಪೇಟೆಯಿಂದ ನಾಪತ್ತೆಯಾಗಿದ್ದರು. ಜನಾರ್ದನ ರೆಡ್ಡಿ ಗಣಿ ಕಪ್ಪ ಹಫ್ತಾ ವಸೂಲಿ ವ್ಯವಹಾರ ನಿರ್ವಹಿಸುತ್ತಿದ್ದ ಸ್ವಸ್ತಿಕ್ ನಾಗರಾಜ್ ಶೆಟ್ಟಿ, ಸ್ವಸ್ತಿಕ್ ಮಿನರಲ್ಸ್ ನ ಮಾಲೀಕರಾಗಿದ್ದಾರೆ.
ಅಕ್ರಮ ಗಣಿಗಾರಿಕೆ ಕುರಿತು ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನೀಡಿದ ವರದಿಯಲ್ಲಿ ಸ್ವಸ್ತಿಕ್ ಮಿನರಲ್ಸ್ ಕೂಡಾ ಆರೋಪ ಪಟ್ಟಿಯಲ್ಲಿದೆ.
ಸಿಬಿಐ ಮೈಂಡ್ ಗೇಮ್ : ನಾಂಪಲ್ಲಿಯ ಸಿಬಿಐ ಕಚೇರಿಗೆ ಕಳೆದ ರಾತ್ರಿ ಬಂದ ಸ್ವಸ್ತಿಕ್ ನಾಗರಾಜ್ ರನ್ನು ಶುಕ್ರವಾರ ಮಧ್ಯಾಹ್ನದ ವರೆಗೂ ಏಕಾಂಗಿಯಾಗಿ ಇರಲು ಬಿಡಲಾಗಿತ್ತು.
ಸಿಬಿಐ ಕಚೇರಿಯಲ್ಲೇ ಊಟ, ತಿಂಡಿ ನಿದ್ದೆ ಮುಗಿಸಿದ್ದ ನಾಗರಾಜ್ ತನ್ನ ಸರದಿಗಾಗಿ ಕಾದು ಕೂತಿದ್ದಾನೆ. ಗಂಟೆಗಟ್ಟಲೆ ಏಕಾಂಗಿಯಾಗಿ ಕೂರುವ ಮೆಂಟಲ್ ಟಾರ್ಚರ್ ವಿಧಾನ ಸದ್ಯಕ್ಕೆ ಜಾರಿಯಲ್ಲಿದೆ. ಆದರೆ, ಸಿಬಿಐ ತಂಡ ಮಾತ್ರ ವಿಳಂಬ ನೀತಿ ಅನುಸರಿಸುತ್ತಿದ್ದು, ನಿಧಾನಗತಿಯಲ್ಲಿ ವಿಚಾರಣೆ ನಡೆಸುತ್ತಾ 'ಮೈಂಡ್ ಗೇಮ್' ಆಡುತ್ತಿದ್ದಾರೆ.
ಸೆ.19ರಂದು ಬಳ್ಳಾರಿ, ಸಂಡೂರು, ಹೊಸಪೇಟೆಗಳಲ್ಲಿನ ರೆಡ್ಡಿ ಆಪ್ತರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದ ಸಿಬಿಐ ತಂಡ, ಖಾರದ ಪುಡಿ ಮಹೇಶ್, ನಾಗರಾಜ್ ಹಾಗೂ ಎಸ್ ಟಿಡಿ ಮಂಜುನಾಥ್ ಮನೆ ಮೇಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿ ಹೋಗಿದ್ದರು.
ಈ ಪೈಕಿ ಎಸ್ಟಿಡಿ ಮಂಜುನಾಥ್, ಸ್ವಸ್ತಿಕ್ ನಾಗರಾಜ್ ವಿಚಾರಣೆಗೆ ಒಳಪಟ್ಟಿದ್ದಾರೆ. ಖಾರದಪುಡಿ ಮಹೇಶ್ ಇನ್ನೂ ನಾಪತ್ತೆಯಾಗಿದ್ದಾರೆ.












Click it and Unblock the Notifications