ಜೂನಿಯರ್ ಕಟ್ಟಾಗೆ ಕೈಕೋಳ : ಕೋರ್ಟ್ ಕಿಡಿಕಿಡಿ

ನ್ಯಾಯಾಂಗ ಬಂಧನ ಅವಧಿ ಸೆ.19ಕ್ಕೆ ಮುಗಿದಿದ್ದ ಕಾರಣ ಕಟ್ಟಾ ಜಗದೀಶ್ ಅವರನ್ನು ಪರಪ್ಪನ ಅಗ್ರಹಾರದ ಜೈಲಿನಿಂದ ಸೋಮವಾರ ಕೋರ್ಟಿಗೆ ಕರೆತರಬೇಕಿತ್ತು. ಆದರೆ, ಬೆಳಗ್ಗೆ ಜೈಲಿನಿಂದ ಹೊರಟಾಗ ಕಟ್ಟಾ ಜಗದೀಶ್‌ಗೆ ಕೈ ಕೋಳ ತೊಡಿಸಲು ಜೈಲಿನ ಪೊಲೀಸರು ಮುಂದಾಗಿದ್ದರು. ಬಳಿಕ ಬೇಡಿ ಹಾಕದೆಯೇ ಲೋಕಾಯುಕ್ತ ಕೋರ್ಟ್‌ಗೆ ಮಧ್ಯಾಹ್ನ ಹಾಜರುಪಡಿಸಲಾಯಿತು.
ಆಗ, ಈ ವಿಷಯವನ್ನು ಕಟ್ಟಾ ಪರ ವಕೀಲ ರವಿ ಬಿ. ನಾಯಕ್ ಅವರು ನ್ಯಾಯಾಧೀಶ್ ಸುಧೀಂದ್ರ ರಾವ್ ಅವರ ಗಮನಕ್ಕೆ ತಂದರು. ಇದರಿಂದ ಆಕ್ರೋಶಗೊಂಡ ನ್ಯಾಯಾಧೀಶರು 'ನೀವು ಜೈಲಿನಿಂದ ಕೋರ್ಟ್‌ಗೆ ಕರೆತರುವ ಎಲ್ಲ ಕೈದಿಗಳಿಗೂ ಕೋಳ ಹಾಕಿಕೊಂಡೇ ಕರೆತರುತ್ತೀರಾ ? ನಾನು ಈಗ ಕೋರ್ಟ್ ಹೊರಗಡೆ ಬಂದು ನೋಡುತ್ತೇನೆ. ನೀವು ಕೈದಿಗಳನ್ನು ಹೇಗೆ ಕರೆತರುತ್ತೀರಿ ಎಂದು, ಕೈದಿಗಳನ್ನು ನೀವು ಹೇಗೆ ಕರೆತರುತ್ತೀರಿ ಎನ್ನುವುದು ನನಗೆ ಗೊತ್ತಿದೆ' ಎಂದು ಪೊಲೀಸರ ವಿರುದ್ಧ ಖಾರವಾಗಿ ಮಾತನಾಡಿದರು.
ಮತ್ತೂಂದೆಡೆ ಆರೋಪಿಗಳಾದ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಕಟ್ಟಾ ಜಗದೀಶ್ ಮತ್ತು ಶ್ರೀನಿವಾಸ್ ಅವರನ್ನು ಸೋಮವಾರ ಬೆಳಗ್ಗೆ ಕೋರ್ಟ್‌ಗೆ ಹಾಜರುಪಡಿಸಬೇಕಿತ್ತು. ಆದರೆ, ಇಬ್ಬರು ಆರೋಪಿಗಳು ಈಗಾಗಲೇ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಕಟ್ಟಾ ಜಗದೀಶ್ ಅವರನ್ನು ಮಧ್ಯಾಹ್ನ ಸುಮಾರು 1 ಗಂಟೆಗೆ ಕೋರ್ಟ್‌ಗೆ ಜೈಲು ಪೊಲೀಸರು ಕರೆತಂದರು.
ಅಷ್ಟೊತ್ತಿಗೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ವಿಸ್ತರಿಸಿ ನ್ಯಾಯಾಧೀಶರು ಆದೇಶ ನೀಡಿದ್ದರು. ಸಮಯಕ್ಕೆ ಸರಿಯಾಗಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸದ ಬಗ್ಗೆಯೂ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications