ಮೂರನೇ ಲಗ್ನಕ್ಕೆ ನಿಂತ ವರನ ಕನಸು ಭಗ್ನ

ಆಂಧ್ರದ ಅನಂತಪುರಂನ ಹಳೆನ ಪಟ್ಟಣದ ವಿನಾಯಕ ನಗರದ ನಿವಾಸಿ ರಾಂಪ್ರಸಾದ್ ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ರೈಲ್ವೆಯಲ್ಲಿ ಚಾಲಕ. ಈಗಾಗಲೇ 2 ವಿವಾಹವಾಗಿದ್ದಾನೆ. ಗುಂಟೂರು ಜಿಲ್ಲೆಯ ಕಾಕಮಾನು ಗ್ರಾಮದ ಬಳ್ಳಾರಿ ನಿವಾಸಿ ಶಿವಪಾರ್ವತಿಯನ್ನು 9 ತಿಂಗಳ ಹಿಂದೆ 2ನೇ ಹೆಂಡತಿಯಾಗಿ ಸಪ್ತಪದಿ ತುಳಿದಿದ್ದ. ಶಿವಪಾರ್ವತಿಗೆ ಬಳ್ಳಾರಿಯಲ್ಲಿ ಒಂದು ಮನೆ ಇದ್ದು. ಮನೆಯ ಮೇಲೆ ಕಣ್ಣು ಹಾಕಿ ಸ್ವಂತಕ್ಕೆ ಬರೆದುಕೊಡಲು ಬೆದರಿಸಿ, ಕಿರುಕುಳ ನೀಡಿ ಆಕೆಯನ್ನು ತವರು ಮನೆಗೆ ಕಳುಹಿಸಿ, 3ನೇ ವಿವಾಹಕ್ಕೆ ಸಿದ್ಧತೆ ನಡೆಸಿದ್ದ.
ಮ್ಯಾರೇಜ್ ಬ್ರೋಕರ್ ಕೊಂಡಯ್ಯ ಎನ್ನುವಾತನನ್ನು ಸಂಪರ್ಕಿಸಿ ವಿವಾಹ ಗೊತ್ತು ಮಾಡಲು ಪೀಡಿಸಿದ್ದಾನೆ. ತಾನು ಅವಿವಾಹಿತ, ಕುರುಬ ಜಾತಿಯವ. ನನ್ನೊಂದಿಗೆ ವಿವಾಹಕ್ಕೆ ಯಾವ ಜಾತಿ ಆದರೂ ಪರ‍್ವಾಗಿಲ್ಲ ಎಂದು ಸಖತ್ತಾಗಿ ರೈಲು ಬಿಟ್ಟಿದ್ದಾನೆ. ಎಲ್ಲ ವಿವರಗಳನ್ನು ಬ್ರೋಕರ್‌ಗೆ ನೀಡಿ, ಕೈಗೊಂದಿಷ್ಟು ಹಣ ತುರುಕಿದ್ದಾನೆ.
ಕೊಂಡಯ್ಯ ಕಂಪ್ಲಿ ಕೊಟ್ಟಾಲದ ಜಯಮ್ಮ ಮತ್ತು ಕಲ್ಲಪ್ಪನವರ ಮನೆ ಮಗಳನ್ನು ತೋರಿಸಿದ್ದಾರೆ. ವರ ಮಹಾಶಯ ಕನ್ಯೆಯನ್ನು ನೋಡಿದ್ದೇ ತಡ ಆಕೆಯನ್ನು ಸ್ಥಳದಲ್ಲೇ ಒಪ್ಪಿ, ಕೂಡಲೇ ಮದುವೆ ದಿನಾಂಕ ಗೊತ್ತು ಮಾಡಿ ಎಂದು ಬ್ರೋಕರ್‌ಗೆ ಫರ್ಮಾನು ನೀಡಿಯೇಬಿಟ್ಟ. ಕೊಂಡಯ್ಯನಿಗೆ ಎಲ್ಲಿಲ್ಲದ ಖುಷಿ. ಈ ವಿವಾಹ ನಡೆದರೆ ಕೈತುಂಬಾ ಹಣ ಸಿಗುವ ಕನಸು ಬೇರೆ. ಕನ್ಯೆಯ ಪೋಷಕರಿಗೆ ವರನ ಒಪ್ಪಿಗೆ ತಿಳಿಸಿಯೇಬಿಟ್ಟ.
ಏನೇ ಆಗ್ಲಿ ಅಂತ ಕನ್ಯೆಯ ಪೋಷಕರು, ಸಂಬಂಧಿಕರು ವರನ ವಿಳಾಸ, ಕೆಲಸದ ಸ್ಥಳ ಎಲ್ಲಾ ನಿಖರ ಮಾಹಿತಿ ಪಡೆದು ತನಿಖೆ ಪ್ರಾರಂಭಿಸಿದರು. ವರಮಹಾಶಯ ರಾಂಪ್ರಸಾದನ ಲೀಲೆಗಳೆಲ್ಲಾ ಒಂದೊಂದಾಗಿ ಬಯಲಾದವು. ರಾಂಪ್ರಸಾದ, ಕೊಂಡಯ್ಯ ಮತ್ತು ಇವರ ಸಂಬಂಧಿಕರು, ರಾಂಪ್ರಸಾದನ 2ನೇ ಪತ್ನಿಯನ್ನು ಒಟ್ಟಿಗೇ ಕರೆಯಿಸಿ ಹಬ್ಬದೂಟ ಮಾಡಿಸಲು ಕನ್ಯೆಯ ಪೋಷಕರು ಒಂದು ಮಾಸ್ಟರ್ ಸ್ಕೆಚ್ ಹಾಕಿಯೇಬಿಟ್ಟರು.
ಕೊಂಡಯ್ಯನಿಗೆ ಫೋನಾಯಿಸಿ ನಾವೂ ಕೂಡ ವರನ್ನ ಒಪ್ಪಿದ್ದೇವೆ. ಲಗ್ನ ಮುಹೂರ್ತಕ್ಕೆ ಕೂಡಲೇ ಬನ್ನಿ ಎಂದರು. ರಾಂಪ್ರಸಾದ್ ಕೂಡಲೇ ಒಂದೇ ದಮ್ಮಿನಲ್ಲಿ ಕೊಂಡಯ್ಯನ ಜೊತೆ ಓಡಿ ಬಂದಿದ್ದಾನೆ. ಬಂದವನಿಗೆ ಕನ್ಯೆಯ ಕಡೆಯವರು ಸರಿಯಾಗಿ ಇಕ್ಕಿದ್ದಾರೆ. ಇದೆಲ್ಲಾ ಆದ ಮೇಲೆ ನಮ್ ಸಿನಿಮಾಗಳಲ್ಲಿ ಪೊಲೀಸರು ಬರ್ತಾರಲ್ಲ ಹಾಗೆ ಕಂಪ್ಲಿ ಪೊಲೀಸರು ಠೀಕುಠಾಕಾಗಿ ಬಂದು, ಆರೋಪಿಗಳನ್ನು ಬಂಧಿಸಿದರು.












Click it and Unblock the Notifications