ಮಂಗಳೂರು : ದರ ಏರಿಸದಿದ್ದರೆ ಬಸ್ ಬಂದ್ ಧಮ್ಕಿ

ತೈಲ ಬೆಲೆ ಏರಿಕೆಯಿಂದಾಗಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವೆಂದು ಸಂಘಗಳು ವಾದಿಸಿ ಬೇಡಿಕೆ ಸಲ್ಲಿಸಿದ್ದವು. ಆದರೆ ಎರಡೂ ಜಿಲ್ಲೆಗಳ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಪ್ರಯಾಣ ದರ ಏರಿಸಲು ವಿಳಂಬ ನೀತಿ ಅನಿಸರಿಸುತ್ತಿವೆ ಎನ್ನುವುದು ಬಸ್ ಮಾಲೀಕರ ಆರೋಪ.
ಖಾಸಗಿ ಬಸ್‌ಗಳ ಪ್ರಯಾಣ ದರ ಏರಿಕೆ ಬಗ್ಗೆ 3 ದಿನಗಳೊಳಗೆ ನಿರ್ಣಯ ಪ್ರಕಟಿಸಬೇಕು; ಇಲ್ಲದಿದ್ದರೆ ಉಭಯ ಜಿಲ್ಲೆಗಳಲ್ಲಿ ಬಸ್ ಬಂದ್ ಚಳವಳಿ ನಡೆಸುವ ಕುರಿತು ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್ ಹಾಗೂ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷ ಭಾಸ್ಕರ ಸಾಲ್ಯಾನ್ ಮತ್ತು ಪ್ರಧಾನ ಕಾರ್ಯದರ್ಶಿ ಅಜೀಜ್ ಪರ್ತಿಪಾಡಿ ತಿಳಿಸಿದ್ದಾರೆ.
ತೈಲ ಬೆಲೆ ಏರಿಕೆಯಾಗಿ 4 ತಿಂಗಳುಗಳೇ ಕಳೆದಿವೆ. ಉಭಯ ಜಿಲ್ಲೆಗಳಲ್ಲಿನ 3,000 ಬಸ್‌ಗಳ ಪೈಕಿ ವಿವಿಧ ರೂಟುಗಳ 150ಕ್ಕೂ ಮಿಕ್ಕಿದ ಬಸ್‌ಗಳು ನಷ್ಟ ಭರಿಸಲಾಗದೆ ಸಂಚಾರವನ್ನು ನಿಲ್ಲಿಸಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರಗಳ ಸಭೆ ನಡೆದು 2 ತಿಂಗಳು ಕಳೆದಿದ್ದು, ಮಾಲಕರ ಸಂಘಟನೆಗಳ ಪ್ರತಿನಿಧಿಗಳು 3 ಬಾರಿ ಪ್ರಾಧಿಕಾರವನ್ನು ಭೇಟಿ ಮಾಡಿ ಪರಿಷ್ಕೃತ ದರ ಜಾರಿಗೆ ವಿನಂತಿಸಿದರೂ ನಿರ್ಲಕ್ಷ್ಯ ತಳೆಯಲಾಗಿದೆ ಎಂದವರು ಆರೋಪಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ತೈಲ ಬೆಲೆ ಏರಿಕೆಯಾದಾಗ ಅದೇ ದಿನ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಸರಕಾರಿ ಬಸ್ ಪ್ರಯಾಣ ದರ ಏರಿಸಲು ರಾಜ್ಯ ಸಾರಿಗೆ ಪ್ರಾಧಿಕಾರ ಅನುಮತಿ ನೀಡಿದೆ. ಆದರೆ ಜಿಲ್ಲಾ ಸಾರಿಗೆ ಪ್ರಾಧಿಕಾರಗಳು ಖಾಸಗಿ ವಲಯದ ಬಸ್ ಯಾನ ದರ ಏರಿಕೆ ಕುರಿತಂತೆ ತಾರತಮ್ಯ ನೀತಿ ಅನುಸರಿಸುತ್ತಿವೆ. ಸರಕಾರಿ ನೋಟಿಫಿಕೇಶನ್‌ನಲ್ಲಿ ಸೂಚಿಸಿದ ದರವನ್ನು 30 ದಿನಗಳೊಳಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು ಎಂಬ ಹೈಕೋರ್ಟ್ ಆದೇಶವನ್ನು ಸಾರಿಗೆ ಪ್ರಾಧಿಕಾರ ಉಲ್ಲಂಘಿಸಿದೆ ಎಂದು ಟೀಕಿಸಿದ್ದಾರೆ.












Click it and Unblock the Notifications