ಜನಾರ್ದನ ರೆಡ್ಡಿ ನ್ಯಾಯಾಂಗ ಬಂಧನ, ಜೈಲಿಗೆ ರವಾನೆ

ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರನ್ನು ಚಂಚಲಗುಡ ಜೈಲಿಗೆ ರವಾನಿಸಲಾಗುವುದು. ಸೆ.19ರವರೆಗೆ ನ್ಯಾಯಾಂಗ ಬಂಧನದಲ್ಲಿಡಲಾಗುವುದು. ಜಾಮೀನು ಅರ್ಜಿ ವಿಚಾರಣೆಯಲ್ಲಿರುವುದರಿಂದ ಸಿಬಿಐ ಕಸ್ಟಡಿಗೆ ನೀಡಲು ಸಾಧ್ಯವಿಲ್ಲ ಎಂದು ಸಿಬಿಐ ಕೋರ್ಟ್ ಸೋಮವಾರ ಸಂಜೆ ತನ್ನ ಆದೇಶದಲ್ಲಿ ಹೇಳಿತು. ಸೆ. 7ರಂದು ರೆಡ್ಡಿಗಳ ಜಾಮೀನು ಅರ್ಜಿ ವಿಚಾರಣೆಗೆ ಬರುತ್ತದೆ.
ರೆಡ್ಡಿಗಳಿಗೆ ಸೇರಿದ 11 ಐಷಾರಾಮಿ ಕಾರು(ರೋಲ್ಸ್ ರಾಯ್, ಲ್ಯಾಂಡ್ ರೋವರ್ ಮುಂತಾದ ಕಾರು)ಗಳನ್ನು ಸಿಬಿಐ ಜಪ್ತಿ ಮಾಡಿಕೊಂಡಿದೆ. ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮಿ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ. ರೆಡ್ಡಿ ಸೋದರರ ಕೋಟಿ ರು ಬೆಲೆಯ ಬಸ್ ಮತ್ತು 'ರುಕ್ಮಿಣಿ' ಹೆಲಿಕಾಪ್ಟರ್ ಕೂಡಾ ಜಪ್ತಿ ಮಾಡಲಾಗಿದೆ.
ವಿಚಾರಣೆ ವಿವರ: ವಾರಂಟ್ ರಹಿತ ಬಂಧನ ಮಾಡಿರುವ ಸಿಬಿಐ ಕ್ರಮವನ್ನು ಪ್ರಶ್ನಿಸಿ, ಜಾಮೀನು ನೀಡುವಂತೆ ಕೋರಿ ರೆಡ್ಡಿ ಪರ 11 ವಕೀಲರು ಅರ್ಜಿ ಸಲ್ಲಿಸಿದ್ದರು. ಜನಾರ್ದನ ರೆಡ್ಡಿ ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷಿ ನಾಶ ಮಾಡುವ ಅಥವಾ ಬೆದರಿಕೆ ಒಡ್ಡುವ ಸಾಧ್ಯತೆ ಇರುವುದರಿಂದ ಜಾಮೀನು ಅರ್ಜಿಯನ್ನು ಸಿಬಿಐ ಕೋರ್ಟ್ ತಿರಸ್ಕರಿಸಿತು.
ಸಿಬಿಐ ತನ್ನ ವ್ಯಾಪ್ತಿ ಮೀರಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದೆ. ರೆಡ್ಡಿ ಅವರ ಬಂಧನ ರಾಜಕೀಯ ದುರುದ್ದೇಶದಿಂದ ಕೂಡಿದೆ. ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಸಂದರ್ಭದಲ್ಲಿ ರೆಡ್ಡಿ ಬಂಧನ ಸರಿಯಿಲ್ಲ. ಸಿಆರ್ ಪಿಸಿ ನಿಯಮಗಳನ್ನು ಅನುಸರಿಸಿಲ್ಲ ಎಂದು ರೆಡ್ಡಿ ಪರ 11 ಜನ ವಕೀಲರು ವಾದ ಮಂಡಿಸಿದರು.
ರೆಡ್ಡಿಗಳನ್ನು ಹೆಚ್ಚಿನ ವಿಚಾರಣಗೆ ಒಳಪಡಿಸಲು ತಮ್ಮ ವಶಕ್ಕೆ ನೀಡಬೇಕೆಂಬ ಸಿಬಿಐ ಮನವಿನ್ನು ಕೋರ್ಟ್ ಪುರಸ್ಕರಿಸಲಿಲ್ಲ. ಸಿಬಿಐ ಹೆಚ್ಚಿನ ದಾಖಲೆಗಳನ್ನು ಒದಗಿಸತಕ್ಕದ್ದು, ಯಾಕೆ ಸಿಬಿಐ ವಶಕ್ಕೆ ನೀಡಬೇಕೆಂಬ ಅಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ನ್ಯಾಯಾಲಯ ಸಿಬಿಐ ನ್ಯಾಯವಾದಿಗಳಿಗೆ ತಿಳಿಸಿತು.
ಟಿಡಿಪಿ ಪ್ರತಿಭಟನೆ : ಅಕ್ರಮ ಗಣಿಗಾರಿಕೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿರುವ ತೆಲುಗುದೇಶಂ ಪಕ್ಷ ಕಾರ್ಯಕರ್ತರು ನಾಂಪಲ್ಲಿ ಕೋರ್ಟ್ ಬಳಿ ಧರಣಿ ನಡೆಸಿದರು. ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ಹಾಗೂ ಬಿಜೆಪಿಯ ಜನಾರ್ದನ ರೆಡ್ಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ 20ಕ್ಕೂ ಅಧಿಕ ಕಾರ್ಯಕರ್ತರು ಬ್ಯಾನರ್ ಹಿಡಿದು ಘೋಷಣೆ ಕೂಗುತ್ತಾ ಧರಣಿ ನಡೆಸಿದರು.
ನಾಂಪಲ್ಲಿ ಕೋರ್ಟ್ ಆವರಣದಲ್ಲಿ ಕಿಕ್ಕಿರಿದ ಜನಸಂದಣಿಯನ್ನು ನಿಯಂತ್ರಿಸಲು ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದಕ್ಕೂ ಮುನ್ನ ಕೋಠಿ ಪ್ರದೇಶದಲ್ಲಿರುವ ಸಿಬಿಐ ಕಚೇರಿಯಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ್ ರೆಡ್ಡಿ ಅವರ ಆರೋಗ್ಯ ತಪಾಸಣೆ ನಡೆಸಿದ ನಂತರ ಕೋರ್ಟ್ ಗೆ ಕರೆತರಲಾಗಿತ್ತು.
ನಾನು ನಿರ್ದೋಷಿ : ಸಿಬಿಐ ಕಚೇರಿ ಬಳಿ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ, 'ನಾನು ನಿರ್ದೋಷಿ, ಸತ್ಯಕ್ಕೆ ಎಂದಿಗೂ ಜಯ ಸಿಕ್ಕೇ ಸಿಗುತ್ತೆ' ಎಂದು ತೆಲುಗು ಭಾಷೆಯಲ್ಲಿ ಟಿವಿ9 ತೆಲುಗು ಸುದ್ದಿವಾಹಿನಿಗೆ ಹೇಳಿದರು.












Click it and Unblock the Notifications