ಎಚ್ಡಿಕೆ ದಂಪತಿ ಮತ್ತೆ ಕೋರ್ಟಿಗೆ ಗೈರು ಹಾಜರಿ

ಮೈನಿಂಗ್ ಲೈಸನ್ಸ್ ಹಾಗೂ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಸುಧೀಂದ್ರರಾವ್ ಅವರು, ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ಗೈರು ಹಾಜರಿಗೆ ಅಸಮಾಧಾನ ವ್ಯಕ್ತಪಡಿಸಿ, ವಕೀಲ ಹಶ್ಮತ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಪ್ರಕರಣದ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿ, ಎಚ್ಡಿಕೆ ದಂಪತಿ ಖುದ್ದು ಹಾಜರಾಗಬೇಕು ಎಂದು ನ್ಯಾಯಾಧೀಶ ಸುಧೀಂದ್ರ ರಾವ್ ಅವರು ಆದೇಶಿಸಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಪರ ವಕೀಲ ಹಶ್ಮತ್ ಪಾಶಾ ಅವರು 15 ದಿನಗಳ ಕಾಲ ಹಾಜರಾತಿ ವಿನಾಯತಿ ನೀಡಬೇಕು ಎಂದು ಕಾಲಾವಾಕಾಶ ಕೋರಿ ಅರ್ಜಿ ಸಲ್ಲಿಸಿದರು.
ಆದರೆ, ಎಚ್ಡಿಕೆ ದಂಪತಿ ಆರೋಗ್ಯ ಸರಿಯಾಗಿ ಇದೆ. ಆಸ್ಪತ್ರೆಗೆ ದಾಖಲಾಗಿಲ್ಲ ವಿನಾಯತಿ ನೀಡಬಾರದು ಎಂದು ಸರ್ಕಾರಿ ಪರ ವಕೀಲರು ವಾದಿಸಿದರು.
ನೋ ಬೇಲ್ : ಇದಕ್ಕೂ ಮುನ್ನ ಮೇಲಿನ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಹೈಕೋರ್ಟ್ ನಲ್ಲಿ ಮತ್ತೊಮ್ಮೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಮೇಲಿನ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ FIR ಅನ್ನು ರದ್ದುಗೊಳಿಸಬೇಕು ಎಂದು ಕುಮಾರಸ್ವಾಮಿ ಅವರ ಪರ ವಕೀಲ ಹಶ್ಮತ್ ಪಾಶಾ ಅವರು ಕೋರಿದ್ದರು. ಆದರೆ, ಮತ್ತೊಮ್ಮೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.












Click it and Unblock the Notifications