ಬಿಜೆಪಿ ತೊರೆಯಲು ಶ್ರೀರಾಮುಲು ನಿರ್ಧಾರ?

ತಮ್ಮ ಮುಂದಿನ ರಾಜಕೀಯ ನಡೆಯನ್ನು ಘೋಷಿಸಲು ಶ್ರೀರಾಮುಲು ಅವರು ಬೆಂಗಳೂರಿನ ಲಲಿತ್ ಅಶೋಕ್ ಹೊಟೇಲಿನಲ್ಲಿ ಬೆಳಿಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ತಮ್ಮ ನಿರ್ಣಯವನ್ನು ತಿಳಿಸಲಿದ್ದಾರೆ ಎಂದು ಶ್ರೀರಾಮುಲು ಅವರ ಆಪ್ತವಲಯ ಮಾತನಾಡಿಕೊಳ್ಳುತ್ತಿದೆ.
ಅಕ್ರಮ ಗಣಿಗಾರಿಕೆಯಲ್ಲಿ ಹೆಸರು ಪ್ರಸ್ತಾಪವಾಗಿದ್ದರಿಂದ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ, ತಮ್ಮನ್ನು ಹರೆಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಅವರು ಆಪ್ತರಲ್ಲಿ ನೋವು ತೋಡಿಕೊಂಡಿದ್ದರು. ಆರೋಪಿ ಪಟ್ಟಿಯಲ್ಲಿರುವ, ಯಡಿಯೂರಪ್ಪ ಬೆಂಬಲಿಗ ವಿ ಸೋಮಣ್ಣ ಅವರನ್ನು ಸಂಪುಟದಲ್ಲಿ ಸೇರಿಸಿಕೊಂಡಿರುವುದು ಶ್ರೀರಾಮುಲು ಮತ್ತು ರೆಡ್ಡಿ ಸಹೋದರರಿಗೆ ಮುಳ್ಳಾಗಿ ಚುಚ್ಚುತ್ತಿತ್ತು.
ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಶ್ರೀರಾಮುಲು ಸಭೆ ನಡೆಸುತ್ತಿದ್ದಾರೆ. ಪಕ್ಷದ ಬೆಂಬಲವಿಲ್ಲದಿದ್ದರೂ ಜನರ ಬೆಂಬಲ ತಮಗೆ ಇನ್ನೂ ಇದೆ ಎಂಬುದನ್ನು ತೋರಿಸಿಕೊಳ್ಳುವುದೇ ಅವರ ಇರಾದೆಯಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರೂ ಕವಡೆ ಕಾಸಿನ ಕಿಮ್ಮತ್ತು ದೊರೆಯುತ್ತಿಲ್ಲ ಎಂಬುದು ಅವರ ಅಳಲು. ವರಮಹಾಲಕ್ಷ್ಮಿ ಹಬ್ಬದಂದು ನಡೆಸಲಾಗಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 'ರಾಜಕೀಯ ಹದಗೆಟ್ಟು ಹೊಲಸಾಗಿದೆ' ಎಂದು ಅವರು ಉದ್ಗರಿಸಿದ್ದರು.
ಶ್ರೀರಾಮುಲು ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂಬ ಗಾಳಿಸುದ್ದಿಯೂ ಹಬ್ಬಿತ್ತು. ಇದನ್ನು ಶ್ರೀರಾಮುಲು ಅವರೇ, 'ಛೆಛೆ, ಇಲ್ರಿ, ಹಂಗೇನಿಲ್ರಿ' ಎಂದು ವಿಷಯವನ್ನು ತೇಲಿಸಿಬಿಟ್ಟಿದ್ದರು. ಜೆಡಿಎಸ್ ನಾಯಕ ವೈಎಸ್ ವಿ ದತ್ತಾ ಕೂಡ ಈ ಗಾಳಿಸುದ್ದಿಯನ್ನು ಗಾಳಿಗೇ ತೂರಿದ್ದಾರೆ. ಈ ಸುದ್ದಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಹೇಳಿದವರನ್ನೇ ಕೇಳಿಕೊಳ್ಳಿ ಎಂದು ಮಾರುತ್ತರ ನೀಡಿದ್ದಾರೆ.












Click it and Unblock the Notifications