ರಾಜಾಜಿನಗರ ಗೆಳತಿಯರ ಕೈವಶವಾದ ವಿದ್ಯಾ ಗಣಪ

ಆದರೆ, ರಾಜಾಜಿನಗರದ 3ನೇ ಬ್ಲಾಕ್ ನ 14ನೇ ಕ್ರಾಸ್ ನಲ್ಲಿ ಕೂಡಿಸಲಾಗುವ ಗಣಪ ಸ್ವಲ್ಪ ಅದೃಷ್ಟವಂತ. ಕಳೆದ ನಾಲ್ಕಾರು ವರ್ಷಗಳಿಂದ ಕಿಲಕಿಲ ನಗುತ್ತ, ರೇಷ್ಮೆ ಸೀರೆಯುಟ್ಟ ಚೆಂದುಳ್ಳಿ ಚೆಲುವೆಯರ ಕೈಗೆ ಸಿಕ್ಕು ಆನಂದದಿಂದ ಪೂಜಿಸಲ್ಪಡುತ್ತಿದ್ದಾನೆ. ವಿದ್ಯಾ ಗಣಪ ಗೆಳತಿಯರ ಸಂಘ ಪ್ರತಿ ವರ್ಷ ಹುಡುಗರಷ್ಟೇ ಉತ್ಸಾಹದಿಂದ ಗಣೇಶನನ್ನು ಕೂಡಿಸುತ್ತಿದ್ದಾರೆ.
2004ರವರೆಗೆ ಈ ಸಾರ್ವಜನಿಕ ಗಣೇಶನನ್ನು ಹುಡುಗರ ಹಿಂಡೇ ಕೂಡಿಸುತ್ತಿತ್ತು. ಆದರೆ, ಒಬ್ಬಬ್ಬರು ಒಂದೊಂದು ದಿಕ್ಕು ಹಿಡಿದಿದ್ದರಿಂದ ಸಾರ್ವಜನಿಕ ಗಣೇಶನನ್ನು 14ನೇ ಕ್ರಾಸ್ ಹುಡುಗಿಯರೇ ಕೈಹಿಡಿಯಬೇಕಾಯಿತು. ಅಂದಿನಿಂದ ಮಹಿಳಾಮಣಿಗಳೇ ಹಬ್ಬ ಬರುತ್ತಿದ್ದಂತೆ ಚಂದಾ ಕೂಡಿಸಿ, ಪೆಂಡಾಲು ಹಾಕಿಸಿ ಗಣೇಶನನ್ನು ಆರಾಧಿಸುತ್ತಿದ್ದಾರೆ.
ಈ ಟೋಳಿಯಲ್ಲಿ ಎಲ್ಕೆಜಿ ಮಕ್ಕಳಿಂದ ಪಿಯುಸಿ ಹುಡುಗಿಯರಿದ್ದಾರೆ. ತಮಗೆ ತಿಳಿದಷ್ಟು ಹಣ ಕೊಡುತ್ತಾರೆ. ಸುತ್ತಲಿನ ಮನೆಯವರು ಹರ್ಷದಿಂದಲೇ ಹಣ ನೀಡುತ್ತಿದ್ದಾರೆ. ಈಗ ಎಲ್ಲವೂ ದುಬಾರಿಯಾಗಿರುವುದರಿಂದ ಗಣೇಶನ ಮ್ಯಾನೇಜ್ ಮೆಂಟ್ ಕೂಡ ದುಬಾರಿಯಾಗಿದೆ ಅನ್ನುತ್ತಾರೆ ವಿದ್ಯಾ ಗಣಪ ಗೆಳತಿಯರ ಸಂಘದ ಸದಸ್ಯೆಯರು.
ಇಲ್ಲಿ ಯಾರೂ ಲೀಡರ್ ಅಂತಿಲ್ಲ. ಎಲ್ಲರೂ ತಮಗೆ ತಿಳಿದಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ಪೂಜೆ ಪುನಸ್ಕಾರಗಳೆಲ್ಲ ಮುಗಿದ ಮೇಲೆ ಹುಡುಗಿಯರೇ ಸೇರಿ ಕಾರಲ್ಲಿ ಗಣೇಶನನ್ನು ಕರೆದೊಯ್ದು ಸ್ಯಾಂಕಿ ಟ್ಯಾಂಕಿನಲ್ಲಿ ವಿಸರ್ಜನೆ ಮಾಡಿ ಬರುತ್ತಾರೆ.












Click it and Unblock the Notifications