ಲೋಕಾಯುಕ್ತ ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರರೂ ಕಳಂಕಿತರೇ

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಯುವಿ ಸಿಂಗ್ ಸಲ್ಲಿಸಿರುವ ವರದಿ ಪ್ರಕಾರ 2010ರ ಮಾರ್ಚ್ 12ರಂದು 'ಕೊಪ್ಪಳ ಎಸ್‌ಪಿ' ಹೆಸರಿಗೆ ಮಹೇಶ್ 6.87 ಲಕ್ಷ ರೂಪಾಯಿ ಲಂಚ ನೀಡಿದ್ದಾನೆ. ಈ ಅವಧಿಯಲ್ಲಿ ಕೊಪ್ಪಳ ಎಸ್‌ಪಿ ಹುದ್ದೆಯಲ್ಲಿದ್ದವರು ಈಶ್ವರಚಂದ್ರ ವಿದ್ಯಾಸಾಗರ್.
ಹೀಗಾಗಿ ಸಿಂಗ್ ವರದಿಯೇ ಈಗ ಲೋಕಾ ಯುಕ್ತದ ಪಾಲಿಗೆ ಬಿಸಿತುಪ್ಪವಾಗಿದೆ. ಬಳ್ಳಾರಿಯ ಅಕ್ರಮ ಗಣಿಗಾರಿಕೆ ಮಾಫಿಯಾದ ಪ್ರಮುಖ ವ್ಯಕ್ತಿ ಯಾಗಿದ್ದ ಮಹೇಶ್ ಮನೆಯ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡ ದಾಖಲೆಗಳನ್ನು ಪರಿಶೀಲಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಆವನಿಂದ ಲಂಚ ಪಡೆದ 600ಕ್ಕೂ ಹೆಚ್ಚು ಅಧಿಕಾರಿಗಳ ಪಟ್ಟಿ ಯನ್ನು ಲೋಕಾಯುಕ್ತ ತನಿಖಾ ತಂಡಕ್ಕೆ ನೀಡಿದ್ದರು. ಈ ಪಟ್ಟಿ ಸಿಂಗ್ ವರದಿಯಲ್ಲಿ ಅಡಕವಾಗಿದ್ದು, ಅದರಲ್ಲಿ ವಿದ್ಯಾಸಾಗರ್ ಹೆಸರೂ ಉಲ್ಲೇಖವಾಗಿದೆ.
ಗಮನಾರ್ಹವೆಂದರೆ ಡಾ. ಸಿಂಗ್ ವರದಿಯಲ್ಲಿ ಹೆಸರು ಉಲ್ಲೇಖವಾಗಿದ್ದ ಇತರೆ ಅಧಿಕಾರಿಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಗೆ ವಾಪಸ್ ಕಳುಹಿಸಿದ್ದಾರೆ.
ಅತ್ತ ಸಿಂಗ್ ವರದಿಯಲ್ಲಿ ವಿದ್ಯಾಸಾಗರ್ ಅವರು ಹಿಂದೆ ನಿರ್ವಹಿಸುತ್ತಿದ್ದ ಹುದ್ದೆಯ ಹೆಸರಿದೆ. ಇತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದವರು ಜಿಂದಾಲ್ ಸಮೂಹದ ಗಣಿ ಕಂಪೆನಿಯಿಂದ ಲಂಚ ಪಡೆದ ಆರೋಪ ಕುರಿತ ಪ್ರಕರಣದ ತನಿಖೆಯನ್ನೂ ವಿದ್ಯಾಸಾಗರ್ ಅವರಿಗೇ ವಹಿಸಲಾಗಿದೆ.












Click it and Unblock the Notifications