ಬೈ ಬೈ ಬೈಚುಂಗ್, ಯೂ ಆರ್ ಗ್ರೇಟ್

ಸುಮಾರು 16 ವರ್ಷಗಳ ಕಾಲ ಭಾರತ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದ 34 ವರ್ಷದ ಬೈಚುಂಗ್, ಫುಟ್ಬಾಲ್ ನಲ್ಲಿ ಖ್ಯಾತ ಶೂಟರ್ ಆಗಿದ್ದರು. ಬುಧವಾರ(ಆ.24) ಎಐಎಫ್ ಎಫ್ ನ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ತಮ್ಮ ವಿದಾಯವನ್ನು ಪ್ರಕಟಿಸಿದರು.
ಕಳೆದ ಒಂದು ವರ್ಷದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ 'ಪೋಸ್ಟರ್ ಬಾಯ್ 'ಭುಟಿಯಾ ಅವರನ್ನು 2014 ರ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಆಡುವ ತಂಡದಿಂದ ಕೈಬಿಡಲಾಗಿತ್ತು. ಭಾರತ ತಂಡದ ನಾಯಕರಾಗಿದ್ದ ಭುಟಿಯಾಗೆ ಇದು ಆಪಾರ ನೋವು ತಂದಿತ್ತು.
ಯುನೈಟೆಡ್ ಸಿಕ್ಕಿಂ ಫುಟ್ಬಾಲ್ ಪರ ಆಟ ಮುಂದುವರೆಸುವುದಾಗಿ ಭುಟಿಯಾ ಹೇಳಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಭುಟಿಯಾ ಇದ್ದೆಡೆ ಮಿಂಚಿನ ಸಂಚಾರವಾದಂತೆ, ಎಂಬ ಅಭಿಮಾನಿಗಳ ನುಡಿ ಸುಳ್ಳಲ್ಲ.
ಭುಟಿಯಾ ಲೈಫ್ ಶೂಟ್ ರೀಪ್ಲೇ: 1976 ಡಿಸೆಂಬರ್ 15 ರಲ್ಲಿ ರೈತನ ಮಗನಾಗಿ ಜನಿಸಿದ ಭುಟಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕಿಂ ಹಾಗೂ ಭಾರತದ ಕೀರ್ತಿ ಪತಾಕೆ ಹಾರಿಸಿ ಬಂದವರು.
ಈಸ್ಟ್ ಬೆಂಗಾಲ್ ಕ್ಲಬ್ ಪರ ಆಟ ಆರಂಭಿಸಿ, 1999ರಲ್ಲಿ ದಿ ಇಂಗ್ಲಿಷ್ ಕ್ಲಬ್ ಬ್ಯೂರಿ ಎಫ್.ಸಿ. ಪರವಾಗಿ ಆಡಿ ಯುರೋಪಿಯನ್ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಹೊರಹೊಮ್ಮಿದರು. ಚೆಸ್ಟರ್ ಫೀಲ್ಡ್ ಪರ ಪ್ರಥಮ ಗೋಲು ದಾಖಲಿಸಿದರು. ನಂತರ ಮಲೇಷ್ಯಾದ ಪೆರಾಕ್ ಎಫ್‌ಎ ಆಡಿದ ಸಾಧನೆ ಮೆರೆದರು.
ಈಸ್ಟ್ ಬೆಂಗಾಲ್ ನಂತರ ಮೋಹನ್ ಬಗಾನ್ ತಂಡ ಸೇರಿದ್ದು ಫಲಕಾರಿಯಾಗಲಿಲ್ಲ. ಭುಟಿಯಾ ನಾಯಕತ್ವದಲ್ಲಿ ಭಾರತ ತಂಡ ಮೂರು ಬಾರಿ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಕಪ್, ಎರಡು ಬಾರಿ ನೆಹರು ಕಪ್ ಗೆದ್ದಿದೆ. ಭಾರತ ಪರ 100 ಪಂದ್ಯಗಳನ್ನು ಆಡಿ 43 ಗೋಲು ಗಳಿಸಿದ ಸಾಧನೆ ಮೆರೆದಿದ್ದಾರೆ.
ಭುಟಿಯಾಗೆ ಅರ್ಜುನ ಪ್ರಶಸ್ತಿ ಹಾಗೂ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಕಾರ್ಲೊಸ್ ಕ್ವಯಿರೊಝ್‌ನ ಫುಟ್ಬಾಲ್ ಪಾಲುಗಾರಿಕೆಯೊಂದಿಗೆ ದೆಹಲಿಯಲ್ಲಿ ಫುಟ್ಬಾಲ್ ಆಟದ ಶಾಲೆಯನ್ನು ಭುಟಿಯಾ ಆರಂಭಿಸಿದ್ದು, ನೈಕ್, ನಟ ಜಾನ್ ಅಬ್ರಹಾಂ ಸಹಕಾರದಿಂದ ಭಾರತದಲ್ಲಿ ಫುಟ್ಬಾಲ್ ಉಳಿಸಿ, ಬೆಳಸುವ ಕನಸು ಹೊತ್ತಿದ್ದಾರೆ. ಎನಿವೇ, ಭುಟಿಯಾ ಎಲ್ಲಾ ಸಾಹಸಕ್ಕೆ ನಮ್ಮ ಶುಭ ಹಾರೈಕೆಗಳು.












Click it and Unblock the Notifications