ಬೆಂಗಳೂರಲ್ಲಿ ಜಡಿಮಳೆ : ಇಗೊ ಬಿಬಿಎಂಪಿ ಸಹಾಯವಾಣಿ

ಮೈಸೂರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಆಮೆಗತಿಯಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಯೋಜನೆಯಿಂದಾಗಿ ಸಂಚಾರಿಗಳಿಗೆ ಅಕ್ಷರಶಃ ನರಕ ಸೃಷ್ಟಿಸಿದೆ. ನಿನ್ನೆ ರಾತ್ರಿ ಮಳೆ ಬಿದ್ದಿದ್ದಕ್ಕೆ ಅತೀವ ವಾಹನ ದಟ್ಟಣೆಯಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಬೇಕಾಗಿತ್ತು. ರಸ್ತೆಯುದ್ದಕ್ಕೂ ಗುಂಡಿಗಳು ಸೃಷ್ಟಿಯಾಗಿದ್ದು, ಕಿಚಿಕಿಚಿ ರಾಡಿ ತುಂಬಿಕೊಂಡಿದೆ.
ಈ ಮಳೆಯಿಂದಾಗಿ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಮತ್ತೆ ಸಂಕಷ್ಟಕ್ಕೀಡಾಗಿದ್ದಾನೆ. ದೇವಸ್ಥಾನದಲ್ಲಿ ಮಳೆ ನೀರು ನುಗ್ಗಿದ್ದರಿಂದ ಭಕ್ತರು ಪರದಾಡುವಂತಾಗಿದೆ. ಸಂಚಾರ ನಿರ್ವಹಣೆ ಕೂಡ ಅವ್ಯವಸ್ಥಿತವಾಗಿರುವುದರಿಂದ ಸಾರ್ವಜನಿಕರು ಬಿಬಿಎಂಪಿ ಜೊತೆಗೆ ಸಂಚಾರಿ ಪೊಲೀಸರನ್ನು ದೂಷಿಸುವಂತಾಗಿದೆ. ಸಂಜೆ ಮೂರು ಮುಕ್ಕಾಲಿಗೆ ನಗರದಲ್ಲೆಲ್ಲ ಕತ್ತಲು ಆವರಿಸಿದೆ.
ರಾಜಾಜಿನಗರದಲ್ಲಿ ಮರವೊಂದು ಉರುಳಿಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಪಾದರಾಯನಪುರದಲ್ಲಿ ಕೆಲ ಮನೆಯ ಗೋಡೆಗಳು ಕುಸಿದಿವೆ. ಕೋರಮಂಗಲದಲ್ಲಿಯೂ ಮಳೆ ಹಚ್ಚಿಹೊಡೆಯುತ್ತಿದೆ. ಪ್ರತಿ ಸಂಜೆ ಮಳೆ ಬೀಳುತ್ತಿರುವುದರಿಂದ ಕಚೇರಿಯನ್ನು ಬೇಗನೆ ಬಿಟ್ಟರೂ ಗಮ್ಯ ತಲುಪುವುದು ಇನ್ನಾವಾಗಲೋ ಎನ್ನುವಂತಾಗಿದೆ. ಇನ್ನು ತಗ್ಗು ಪ್ರದೇಶದಲ್ಲಿ ವಾಸಿಸುವ ನಾಗರಿಕರ ಗೋಳಂತೂ ಕೇಳುವುದೇ ಬೇಡ.
ಬಿಬಿಎಂಪಿಗೆ ಸಹಾಯವಾಣಿ : ಮಳೆಯಿಂದ ತೊಂದರೆಯುಂಟಾದರೆ ಬಿಬಿಎಂಪಿ ಸಹಾಯವಾಣಿ : 080-22660000 ಅಥವಾ ಬಿಬಿಎಂಪಿ ಕಂಟ್ರೋಲ್ ರೂಮ್ : 080-22221188 ಸಂಖ್ಯೆಗಳಿಗೆ ಕರೆ ಮಾಡಿ ದೂರು ನೀಡಬಹುದು. ಎಂಥದೇ ತೊಂದರೆ ಉಂಟಾದರೂ ತಕ್ಷಣ ಸಹಾಯಕ್ಕೆ ಸಿದ್ಧ ಎಂದು ಬಿಬಿಎಂಪಿ ಕಮಿಷನರ್ ಸಿದ್ದಯ್ಯ ಹೇಳಿದ್ದಾರೆ.











Click it and Unblock the Notifications