ಶಿವಮೊಗ್ಗ ಉಸಾಬರಿ ಬೊಮ್ಮಾಯಿಗೆ; ಯಡಿಯೂರಪ್ಪ ಮೇಲುಗೈ

ಅಲ್ಲಿಗೆ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆಎಸ್ ಈಶ್ವರಪ್ಪ ಅವರೂ ಸ್ವಲ್ಪಮಟ್ಟಿಗೆ ಹಿನ್ನಡೆ ಅನುಭವಿಸಿದ್ದಾರೆ. ಆದರೂ ಯಡಿಯೂರಪ್ಪ-ಈಶ್ವರಪ್ಪ ಶಿವಮೊಗ್ಗದ ಹಕ್ಕ-ಬುಕ್ಕ ಎಂದೇ ಖ್ಯಾತರು. ಇನ್ನು ವಿಧಾನ ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ, ಹರತಾಳು ಹಾಲಪ್ಪ, ಇತ್ತೀಚೆಗೆ ರೇಣುಕಾಚಾರ್ಯ, ಬೇಳೂರು ಗೋಪಾಲಕೃಷ್ಣ ಅಂತಹ ನಾಯಕರು ಶಕ್ತಿ ಕೇಂದ್ರ ಶಿವಮೊಗ್ಗ ಜಿಲ್ಲೆಯವರೇ. ಆದರೆ ಇವರೆಲ್ಲ ಜಿಲ್ಲೆಯಲ್ಲಿ ಭದ್ರರಾಗಿ ಕುಳಿತು ಎಲ್ಲಿ ತಮ್ಮ ಬುಡಕ್ಕೆ ನೀರು ತರುತ್ತಾರೋ ಎಂಬ ಲೆಕ್ಕಾಚಾರದಲ್ಲಿರುವ ಯಡಿಯೂರಪ್ಪ ಇಂದೂ ಮೇಲುಗೈ ಸಾಧಿಸಿದ್ದಾರೆ.
ಇನ್ನು, ಕಳೆದ ಕೆಲವು ದಿನಗಳಿಂದ ಮಂತ್ರಿಯಾಗಲೇಬೇಕೆಂದು ಬೇಳೂರು ಇನ್ನಿಲ್ಲದ ಕಸರತ್ತುಗಳನ್ನು ಮಾಡಿದರು. ಯಡಿಯೂರಪ್ಪ ಹೋದಲ್ಲಿ, ಬಂದಲ್ಲಿ ಅವರ ಹಿಂದೆಯೇ ತಿರುಗಾಡಿದರು. ಆದರೆ, ಇವ್ಯಾವೂ ಸದ್ಯಕ್ಕೆ ಫಲಕೊಟ್ಟಂತೆ ಕಾಣುತ್ತಿಲ್ಲ. ಇದಕ್ಕೆ ಕೆಎಸ್ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ ಇವರಿಬ್ಬರೂ ತಮ್ಮ ಇತ್ತೀಚಿನ ಶಿವಮೊಗ್ಗದ ಭೇಟಿಯಲ್ಲಿ ಆಡಿದ ಮಾತುಗಳು ಪೂರಕವಾಗಿವೆ.
'ಜಿಲ್ಲೆಯಲ್ಲಿ ನಾನಿದ್ದೇನೆ, ಈಶ್ವರಪ್ಪ ಇದ್ದಾರೆ. ಇನ್ಯಾಕೆ ಇಲ್ಲಿ?' ಎಂಬ ಅರ್ಥದ ಮಾತುಗಳನ್ನು ಯಡಿಯೂರಪ್ಪ ಆಡಿದ್ದರೆ, ಕೆಎಸ್ ಈಶ್ವರಪ್ಪ, 'ಒತ್ತಡ ತಂದರೆ ಶಿಸ್ತು ಕ್ರಮ' ಎಂದು ಗದರಿಕೊಂಡಿದ್ದಾರೆ.
ಉಳಿದಂತೆ ಜಿಲ್ಲೆಯ ಶಾಸಕ ಕೆ.ಜಿ. ಕುಮಾರಸ್ವಾಮಿ ಮೇಲೆ ಯಡಿಯೂರಪ್ಪ, ಈಶ್ವರಪ್ಪ ಅವರಿಬ್ಬರಿಗೂ ಅಷ್ಟಕ್ಕಷ್ಟೇ. ವಿಧಾನ ಪರಿಷತ್ ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಭಾರತೀಶೆಟ್ಟಿ, ಪ್ರೊ.ಕೃಷ್ಣಭಟ್ ಅವರಿಗೆ ಸಚಿವ ಸ್ಥಾನ ನೀಡುವುದು ಈಗಿನ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ.
'ಒಂದು ವೇಳೆ ಯಾರಿಗೇ ಸಚಿವ ಸ್ಥಾನ ನೀಡಿದರೂ ಅವರಿಗೆ ಜಿಲ್ಲೆಯ ಉಸ್ತುವಾರಿಯನ್ನೂ ನೀಡಬೇಕು. ನಮ್ಮ ಕೆಲಸಕ್ಕೆ ಅವರ ಹಿಂದೆ ತಿರುಗಬೇಕು. ಇದು ಕೊನೆಗೆ ನಮಗೇ ತಿರುಮಂತ್ರವಾದೀತು; ಇದು ನಮ್ಮ ಅಸ್ತಿತ್ವದ ಪ್ರಶ್ನೆ ಕೂಡ. ಹಾಗಾಗಿ, ಜಿಲ್ಲೆಯ ಯಾರಿಗೂ ಸಚಿವ ಸ್ಥಾನ ಕಲ್ಪಿಸುವುದು ಬೇಡ' ಎಂಬ ತೀರ್ಮಾನಕ್ಕೆ ಯಡಿಯೂರಪ್ಪ-ಈಶ್ವರಪ್ಪ ಇಬ್ಬರೂ ಬಂದಿದ್ದಾರೆಂಬ ಮಾತುಗಳು ಬಿಜೆಪಿಯಲ್ಲಿ ಈಗ ಜಾಲ್ತಿಯಲ್ಲಿವೆ.












Click it and Unblock the Notifications