ದುಬಾರೆಯಲ್ಲಿ ಜಿಂಕೆ ಬೇಟೆ : ಐವರ ಬಂಧನ

ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಒಂಟಿಯಂಗಡಿಯ ನಿವಾಸಿಗಳಾದ ಪಿ.ಕೆ.ಅಯ್ಯಪ್ಪ, ಪಿ.ಕೆ.ಉಮೇಶ, ಪಿ.ಕೆ.ದೇವಪ್ಪ, ಕೆ.ಕೆ.ಮರಿಯ ಹಾಗೂ ರಾಮ ಎಂಬುವರುಗಳು ಬಂಧಿತ ಬೇಟೆಗಾರರಾಗಿದ್ದಾರೆ. ಇವರು ಸೋಮವಾರ ಸಂಜೆ ಬೇಟೆಯಾಡುವ ಉದ್ದೇಶದಿಂದ ಮಾಲ್ದಾರೆ ಮೀಸಲು ಅರಣ್ಯದ ದುಬಾರೆ ಅರಣ್ಯ ಪ್ರದೇಶಕ್ಕೆ ಕೋವಿಯೊಂದಿಗೆ ಅಕ್ರಮವಾಗಿ ಪ್ರವೇಶಿಸಿ ಕಾಡು ಹಂದಿಯನ್ನು ಬೇಟೆಯಾಡಲು ಮುಂದಾಗಿದ್ದಾರೆ.
ಆದರೆ ಅರಣ್ಯದಲ್ಲೆಲ್ಲಾ ಕೋವಿಯೊಂದಿಗೆ ಸುತ್ತಾಡಿದರೂ ಯಾವುದೇ ಕಾಡುಹಂದಿ ಇವರ ಕಣ್ಣಿಗೆ ಬಿದ್ದಿಲ್ಲ. ಆದರೂ ಬೇಟೆಯನ್ನು ಮುಂದುವರೆಸಿದ್ದಾರೆ. ಸಂಜೆ ವೇಳೆ ಜಿಂಕೆಯೊಂದು ಪೊದೆಯಲ್ಲಿ ಕಾಣಿಸಿದ್ದರಿಂದ ತಡಮಾಡದೆ ಅದರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡೇಟಿಗೆ ಸಿಕ್ಕ ಜಿಂಕೆ ಸ್ಥಳದಲ್ಲಿಯೇ ಸತ್ತುಬಿದ್ದಿದೆ. ಕೂಡಲೇ ಅದನ್ನು ಹೊತ್ತೊಯ್ದು ದುಬಾರೆ ಗೇಟ್ ಹಾಡಿ ಬಳಿ ಚರ್ಮ ಬೇರ್ಪಡಿಸಿ ಮಾಂಸ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಇತ್ತ ದುಬಾರೆ ಆರ್‌ಎಫ್‌ಓ ಅಚ್ಚಪ್ಪ ಅವರಿಗೆ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿರುವ ಖಚಿತ ಮಾಹಿತಿ ತಲುಪಿ, ಕೂಡಲೇ ಅವರು ವನಪಾಲಕರಾದ ಸಂದೀಪ್, ವಿಜಯಕುಮಾರ್, ನಂಜೇಗೌಡ, ನಾರಾಯಣಮೂಲ್ಯ, ಕಮಲಾಕ್ಷ ಹಾಗೂ ಚಾಲಕ ನಾರಾಯಣ ಅವರೊಂದಿಗೆ ಸ್ಥಳಕ್ಕೆ ತೆರಳಿ ಜಿಂಕೆ ಮಾಂಸದ ಸಹಿತ ಆರೋಪಿಗಳನ್ನು ಬಂಧಿಸಿದರು. ಮಂಗಳವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.












Click it and Unblock the Notifications