ಮೈ ಲಾರ್ಡ್! ಬಡವರ ಶಿಕ್ಷಣಕ್ಕಾಗಿ ಗಣಿ ದುಡ್ಡು ಹೊಡೆದೆ

'ಮಹಾಸ್ವಾಮಿ, ನಾನು ಏನು ದುಡ್ಡು ಹೊಡೆದಿದ್ದೀನಿ ಎಂದು ಆ ಲೋಕಾಯುಕ್ತ ಹೆಗ್ಡೆ ಅವರು ಹೇಳುತ್ತಿದ್ದಾರೆ, ವಾಸ್ತವವಾಗಿ ನನ್ನ ಸ್ವಂತಕ್ಕೆ ಬಳಸಿಕೊಳ್ಳಲು ಅದನ್ನು ತೆಗೆದುಕೊಳ್ಳಲಿಲ್ಲ. ಬಡ ಮಕ್ಕಳಿಗೆ ಮುಫತ್ತಾಗಿ ಶಿಕ್ಷಣ ಕೊಡಿಸಲು ಪ್ರೇರಣ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದೆ. ನೀವು ತಪ್ಪು ತಿಳೀಬಾರದು' ಎಂದು ಕೋರ್ಟಿಗೆ ಅಲವತ್ತುಕೊಂಡಿದ್ದಾರೆ.
ಇದು ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೊಸ ವರಸೆ. ಹಾಗಾಗಿಯೇ ಅಕ್ರಮ ಗಣಿಗಾರಿಕೆಗೆ ಸಂಬಂಧ ಲೋಕಾಯುಕ್ತರು ಜುಲೈ 27ರಂದು ನೀಡಿರುವ ತನಿಖಾ ವರದಿಯನ್ನು ರದ್ದುಪಡಿಸಬೇಕೆಂದು ಕೋರಿ ಅವರು ಸೋಮವಾರ ಹೈಕೋರ್ಟ್ ಮೊರೆ ಹೋಗಿದ್ದಾರೆ.
'ವರದಿಯಲ್ಲಿ ನನ್ನ ಹೆಸರನ್ನು ಸೇರಿಸುವ ಮುನ್ನ ನೋಟಿಸ್ ಜಾರಿ ಮಾಡಿಲ್ಲ. ಈ ಕುರಿತು ನನ್ನ ಅಹವಾಲು ಆಲಿಸಿಲ್ಲ. ಒಂದು ವೇಳೆ ನೋಟಿಸ್ ಜಾರಿ ಮಾಡಿ, ಮುಂಚೆಯೇ ಮಾಹಿತಿ ನೀಡಿದ್ದರೆ, ಆರೋಪಗಳಿಗೆ ನಾನು ಹಾಗೂ ನನ್ನ ಕುಟುಂಬದವರು ಸಮಜಾಯಿಷಿ ನೀಡುತ್ತಿದ್ದೆವು. ಆದರೆ ನ್ಯಾ. ಹೆಗ್ಡೆ ಅವರು ಸ್ವಯಂಪ್ರೇರಿತವಾಗಿ ಹೆಸರು ಉಲ್ಲೇಖಿಸಿದ್ದಾರೆ. ಇದು ಸಹಜ ನ್ಯಾಯಕ್ಕೆ ವಿರುದ್ಧ.
'ವರದಿ ಸರ್ಕಾರದ ಕೈಸೇರುವ ಮೊದಲೇ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ವರದಿ ಅಧಿಕೃತವಾಗಿ ಸಲ್ಲಿಕೆಯಾಗಿಲ್ಲ ಎಂದು ತಿಳಿದಿದ್ದರೂ ಅದರಲ್ಲಿ ನನ್ನ ಹೆಸರು ಇರುವುದನ್ನು ಹೆಗ್ಡೆ ಅವರು ಮಾಧ್ಯಮಗಳ ಮುಂದೆ ಖಚಿತಪಡಿಸಿದ್ದರು. ಇದು ನನ್ನನ್ನು ಹಾಗೂ ನನ್ನ ಪಕ್ಷವನ್ನು ಬಹಳ ಮುಜುಗರಕ್ಕೆ ಸಿಲುಕಿಸಿತು. ವರದಿಯಲ್ಲಿನ ಅಂಶಗಳು ತಿಳಿಯದೆ ನಾನು, ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಒದ್ದಾಡಬೇಕಾದ ಸನ್ನಿವೇಶ ಎದುರಾಯಿತು'.
'ಇವೆಲ್ಲವುಗಳಿಂದ ನಾನು ನನ್ನ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳಬೇಕಾಯಿತು. ಇದು ನನ್ನ ರಾಜಕೀಯ ಭವಿಷ್ಯಕ್ಕೂ ಧಕ್ಕೆ ಉಂಟು ಮಾಡುವಂತಾಗಿದೆ. ಈ ಎಲ್ಲ ಕಾರಣಗಳಿಂದ ವರದಿಯ ರದ್ದತಿಗೆ ಆದೇಶಿಸಬೇಕು, ವಿಚಾರಣೆ ಮುಗಿಯುವವರೆಗೆ ಮಧ್ಯಂತರ ತಡೆ ನೀಡಬೇಕು' ಎಂದು ಕೋರಿದ್ದಾರೆ.
ಈ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ನೇತೃತ್ವದ ವಿಭಾಗೀಯ ಪೀಠದ ಮುಂದೆ ಯಡಿಯೂರಪ್ಪನವರ ಪರ ವಕೀಲರು ಕೋರಿಕೊಂಡರು. ಅದಕ್ಕೆ ಪೀಠ ಸಮ್ಮತಿ ನೀಡಿದ್ದಾರೆ.












Click it and Unblock the Notifications