ಎಲ್ ಪಿಜಿ ಕಳಕೊಂಡವರ ಗೋಳು ಕೇಳೋರು ಯಾರು?

ಎಲ್ ಪಿಜಿ ಸಂಪರ್ಕ ಕಡಿಸಿಕೊಂಡವರು ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ದಿನನಿತ್ಯದ ಅಗತ್ಯವಾಗಿರುವ ಗ್ಯಾಸ್ ಸಿಲಿಂಡರ್ ಪಡೆಯಲು ಹರಸಾಹಸಪಡುತ್ತಿದ್ದಾರೆ. ಯಾಕೆ ಸಂಪರ್ಕ ಕಡಿತಗೊಂಡಿದೆ ಎಂಬ ಪ್ರಶ್ನೆಗೆ ಗ್ರಾಹಕರಿಗೆ ಸೂಕ್ತವಾದ ಮಾಹಿತಿ ಮತ್ತು ಪರಿಹಾರ ದೊರಕುತ್ತಿಲ್ಲ.
ವಿಧಾನಸೌಧದಲ್ಲಿ ನಡೆಯುತ್ತಿರುವ ಡೊಂಬರಾಟ ಎಲ್ ಪಿಜಿ ಗ್ರಾಹಕರ ಮೇಲೆ ನೇರವಾಗಿ ಹೊಡೆತ ನೀಡಿದೆ. ಎಲ್ ಪಿಜಿ ಸಂಪರ್ಕದ ಸ್ಥಿತಿಗತಿಯನ್ನು ತಿಳಿಯಲೆಂದು ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಇಲಾಖೆ ಆರಂಭಿಸಿರುವ ಆಹಾರ ಕರ್ನಾಟಕ ವೆಬ್ ಸೈಟಿಗೆ ಹೋದರೆ ಸಂಪರ್ಕವೇ ಕಡಿತಗೊಂಡಿರುವುದು ತಿಳಿದು ಕಕ್ಕಾಬಿಕ್ಕಿಯಾಗಿದ್ದಾರೆ.
ಇಲಾಖೆ ಕೇಳಿದಾಗ ರೇಷನ್ ಕಾರ್ಡ್, ವಿದ್ಯುತ್ ಬಿಲ್ ಎಲ್ಲ ಸರಿಯಾಗಿ ನೀಡಿದ್ದೇವೆ. ಆದರೂ ಸಂಪರ್ಕವನ್ನು ಅನ್ಯಾಯವಾಗಿ ಕಡಿತಗೊಳಿಸಲಾಗಿದೆ ಎಂಬುದು ಗ್ರಾಹಕರ ದೂರು. ಆ ದಾಖಲೆಗಳನ್ನು ಕೊಟ್ಟಾಗ ಒಂದು ರಸೀತಿಯನ್ನೂ ನೀಡದಿರುವುದು ಈ ಗೊಂದಲಗಳಿಗೆ ಕಾರಣವಾಗಿದೆ ಎಂಬುದು ಇನ್ನೊಬ್ಬರ ಅಳಲು.
ಸರಿಯಾದ ದಾಖಲೆ ಸಲ್ಲಿಸಿದವರ ಸಂಪರ್ಕ ಕಡಿಯುವುದಿಲ್ಲ ಎಂದು ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಸಚಿವೆ ಶೋಭಾ ಕರಂದ್ಲಾಜೆ ಆಶ್ವಾಸನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ವೆಬ್ ಸೈಟಿನಲ್ಲಿ ಸರಿಯಾದ ದಾಖಲೆ ಸಲ್ಲಿಸಬೇಕೆಂಬ ಕೋರಿಕೆಗೆ ಪ್ರತಿಯಾಗಿ ದಾಖಲೆ ಸಲ್ಲಿಸಿದರೂ ವೆಬ್ ಸೈಟ್ 'ಎರರ್' ಸಂದೇಶ ತೋರಿಸುತ್ತಿದೆ ಅಥವಾ ಮಧ್ಯದಲ್ಲಿಯೇ ಹ್ಯಾಂಗ್ ಆಗುತ್ತಿದೆ.
ಶೋಭಾ ಕರಂದ್ಲಾಜೆಯವರು ಈಗ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದರಿಂದ, ಮುಂದೇನಾಗುವುದೋ ಎಂಬ ಆತಂಕವೂ ಅಧಿಕಾರಿಗಳಲ್ಲಿ ಮನೆಮಾಡಿದೆ ಎಂಬುದು ಗ್ರಾಹಕರೊಬ್ಬರ ವ್ಯಾಖ್ಯಾನ. ಸಿಎಂ ಯಾರಾದರೇನಂತೆ ನಮಗೊಂದು ಎಲ್ ಪಿಜಿ ಸಿಕ್ಕರೆ ಸಾಕು ಎಂಬ ಹಂತಕ್ಕೆ ಗ್ರಾಹಕರು ತಲುಪಿದ್ದಾರೆ.











Click it and Unblock the Notifications