ನಡೆದಿದೆ ಯಡಿಯೂರಪ್ಪ ಬಂಡಾಯ ಸಭೆ, ಸರಕಾರದ ವಿಸರ್ಜನೆ?

'ಬೆಂಗಳೂರಿನಲ್ಲಿ ಸಚಿವರು, ಶಾಸಕರ ಸಭೆ ನಡೆಸಬೇಡಿ' ಎಂದು ಹೈಕಮಾಂಡ್ ಕಳಿಸಿದ್ದ ತುರ್ತು ಸಂದೇಶವನ್ನು ಧಿಕ್ಕರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಸಿದ್ದಾರೆ. ದೆಹಲಿಯಿಂದ ಆಕಾಶಮಾರ್ಗದಲ್ಲಿ ಬೆಂಗಳೂರಿನಲ್ಲಿ ಇಳಿಯುತ್ತಿದ್ದಂತೆ ನೇರವಾಗಿ ಯಡಿಯೂರಪ್ಪ ಅವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಧಾವಿಸಿದರು. ಸಭೆಯ ಮಧ್ಯೆ ಶಾಸಕರು, ಸಚಿವರೊಂದಿಗೆ ಉಪಹಾರ ಸೇವಿಸುತ್ತಾ ಮುಂದಿನ ಕಾರ್ಯತಂತ್ರಗಳ ಬಗ್ಗೆ ಕ್ಲುಪ್ತವಾಗಿ ಮಾತುಕತೆ ನಡೆಸಿದರು.
ಗಮನಾರ್ಹವೆಂದರೆ 'ಯಡಿಯೂರಪ್ಪ ಸಭೆಯಲ್ಲಿ ಪಾಲ್ಗೊಳ್ಳಬೇಡಿ' ಎಂದು ಹೈಕಮಾಂಡ್ ನೀಡಿದ್ದ ಆದೇಶವನ್ನು ಬಹುತೇಕ ಶಾಸಕರು, ಸಚಿವರು ಧಿಕ್ಕರಿಸಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಸಭೆಯ ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ನಡೆಯುವ ಸಾಧ್ಯತೆ ಇದೆ. ಆ ಸಭೆಯಲ್ಲಿ ಸರಕಾರದ ವಿಸರ್ಜನೆಗೆನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಅತ್ತ, 'ತಮ್ಮ ನಿಲುವಿನಲ್ಲೂ ಯಾವುದೇ ಬದಲಾವಣೆಯಿಲ್ಲ. ಯಡಿಯೂರಪ್ಪ ನಿರ್ಗಮನ ಖಚಿತ' ಎಂದಿರುವ ಬಿಜೆಪಿ ಹೈಕಮಾಂಡ್ 10.30ಕ್ಕೆ ದೆಹಲಿಯಲ್ಲಿ ಗಡ್ಕರಿ ನಿವಾಸದಲ್ಲಿ ಸಭೆ ಆಯೋಜಿಸಿದೆ. ಸಭೆಗೆ ಆಡ್ವಾಣಿ, ಜೇಟ್ಲಿ, ವೆಂಕಯ್ಯನಾಯ್ಡು ಮತ್ತು ಪ್ರಧಾನ್ ಈಗಾಗಲೇ ಆಗಮಿಸಿದ್ದು, ಸುಷ್ಮಾ ಸ್ವರಾಜ್ ಅವರಿಗೆ ಕಾಯಲಾಗುತ್ತಿದೆ ಎಂದು ತಿಳಿದುಬಂದಿದೆ.












Click it and Unblock the Notifications