ರಾಷ್ಟ್ರಪತಿ ಆಡಳಿತಕ್ಕೆ ಭರದ ಸಿದ್ಧತೆ, ಚುರುಕಾದ ಕಾಂಗ್ರೆಸ್

ರಾಜೀನಾಮೆಗಾಗಿ ಯಡಿಯೂರಪ್ಪಗೆ ಹೈಕಮಾಂಡ್ ನೀಡಿದ್ದ ಡೆಡ್ ಲೈನ್ ಸಮೀಪಿಸುತ್ತಿದೆ. ಆದರೆ ಯಡಿಯೂರಪ್ಪ ಸಾಕಷ್ಟ ಲೆಕ್ಕಾಚಾರ ಹಾಕುತ್ತಿದ್ದಾರೆ. ರಾಜೀನಾಮೆ ವಿಷಯ ಇನ್ನೂ ಅವರ ಮನಸ್ಸಿಗೆ ಬಂದಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರ ಜತೆಗೂಡಿ ಹೇಗಾದರೂ ಅಧಿಕಾರ ಉಳಿಸಿಕೊಳ್ಳುವ ಧಾವಂತದಲ್ಲಿ ಪದ್ಮನಾಭನಗರದಲ್ಲಿರುವ ದೊಡ್ಡಗೌಡರ ಭೇಟಿಗೆ ಯತ್ನಿಸುತ್ತಿದ್ದಾರೆ ಎಂದು ನಮ್ಮ ವರದಿಗಾರರು ತಿಳಿಸಿದ್ದಾರೆ.
ಸರಿ ಅವರನ್ನು ಓವರ್ ಟೇಕ್ ಮಾಡಿ ಬೇರೆ ಯಾರನ್ನಾದರೂ ನಿಯೋಜಿಸೋಣವೆಂದರೆ ಅಷಾಡ, ಅಮಾವಾಸ್ಯೆಗಳು ಅಡ್ಡ ಬರುತ್ತಿವೆ. ಅಷಾಡ ಮಾಸ ಇದೇ ತಿಂಗಳ 30ಕ್ಕೆ ಮುಗಿಯಲಿದೆ. ಈ ಮಧ್ಯೆ, ಹೈಕಮಾಂಡ್ ಹೊಸ ನಾಯಕನ ಆಯ್ಕೆಗಾಗಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ಕರೆದಿದೆ.
ಅಷಾಢ ಮಾಸದಲ್ಲಿ ಹೊಸ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತುಕೊಳ್ಳಲು ಯಾರೂ ಸುತರಾಂ ಒಪ್ಪುತ್ತಿಲ್ಲ. ಅಷಾಢ ಕಳೆಯಲಿ ನೋಡೋಣ ಎನ್ನುತ್ತಿದ್ದಾರೆ. ಕೆಲವರು ಯಡಿಯೂರಪ್ಪ ಅವರ ಮುಂದಿನ ನಡೆಗಾಗಿಯೂ ಕಾಯುತ್ತಿದ್ದಾರೆ. ಒಂದಷ್ಟು ಶಾಸಕರು ಮತ್ತು ಸಚಿವರು ಯಡಿಯೂರಪ್ಪ ಮನೆ ಬಿಟ್ಟು ಕದಲುತ್ತಿಲ್ಲ. ಈ ಬೆಳವಣಿಗೆಗಳು ಬಿಜೆಪಿ ಹೈಕಮಾಂಡ್ ಗೆ ಪೀಕಲಾಟ ತಂದಿದೆ.
ಈ ಮಧ್ಯೆ, ಅಧಿಕಾರಕ್ಕಾಗಿ ಹಸಿದಿರುವ ರಾಜ್ಯ ಕಾಂಗ್ರೆಸ್, ತಕ್ಷಣ ಕೇಂದ್ರ ಸರಕಾರಕ್ಕೆ ಒಂದು ರಿಪೋರ್ಟ್ ಹಾಕಿ ಎಂದು ರಾಜ್ಯಪಾಲ ಭಾರದ್ವಾಜ್ ಗೆ ದುಂಬಾಲು ಬಿದ್ದಿದೆ. ಹಳೆಯ ಕಾಂಗ್ರೆಸ್ಸಿಗ ಭಾರದ್ವಾಜ್ ಅಂತೂ ಸಿಕ್ಕಿದ್ದೇ ಚಾನ್ಸ್ ಅಂತ ತಮ್ಮ ಪಾಂಡಿತ್ಯವನ್ನೆಲ್ಲ ಪ್ರದರ್ಶಿಸುತ್ತಿದ್ದಾರೆ. ನೋಡಬೇಕು ಏನಾಗುತ್ತದೋ ...












Click it and Unblock the Notifications