ರೆಡ್ಡಿಗಳಿಗೆ ಹಿನ್ನಡೆ : ಬಳ್ಳಾರಿ ಜನತೆ ಏನಂತಾರೆ?

What Bellary people say about illegal mining scam
ಬಳ್ಳಾರಿ, ಜು. 28 : ಜಿಲ್ಲೆಯಾದ್ಯಂತ ಅನೇಕರಲ್ಲಿ ಹರ್ಷದ ವಾತಾವರಣ ಮೂಡಿದೆ. ಜಿಲ್ಲೆಯ ಚಟುವಟಿಕೆಗಳ ಮೂಲವಾಗಿದ್ದ ಗಣಿ ಉದ್ಯಮಕ್ಕೆ ಗರಬಡಿದಿರುವಾಗಲೇ ರಾಜ್ಯ ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಬದಲಾವಣೆ ಆಗುತ್ತಿರುವುದು ಅನೇಕರಲ್ಲಿ ಹರ್ಷ ಮೂಡಿದೆ. ಅಕ್ರಮ - ಅನಧಿಕೃತ ಗಣಿಗಾರಿಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದೇ ಹೇಳಲಾಗಿದೆ.

ಇಡೀ ಗಣಿ ಹಗರಣದ ಕೇಂದ್ರಬಿಂದು ಬಳ್ಳಾರಿ ಜಿಲ್ಲೆ. ಈ ಜಿಲ್ಲೆಯ ಉಸ್ತುವಾರಿ ಸಚಿವ ಜಿ. ಜನಾರ್ದನರೆಡ್ಡಿ, ಸಚಿವರಾದ ಬಿ. ಶ್ರೀರಾಮುಲು, ಜಿ. ಕರುಣಾಕರರೆಡ್ಡಿ, ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ, ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ, ಕಂಪ್ಲಿ ಶಾಸಕ ಟಿ.ಎಚ್. ಸುರೇಶ್‌ಬಾಬು ಅವರನ್ನು ಒಳಗೊಂಡ ಹಗರಣದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

1999ರ ಚುನಾವಣೆಯ ನಂತರ ಸುಷ್ಮಾ ಸ್ವರಾಜ್ ಅವರ ಆಶೀರ್ವಾದ ಮತ್ತು ಹೆಸರಿನಲ್ಲಿಯ ಬಂಡವಾಳವನ್ನೇ ಮೂಲವಾಗಿ ಮಾಡಿಕೊಂಡು ಕ್ರಮೇಣ ಅಧಿಕಾರದ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿದ ಜಿ. ಜನಾರ್ದನರೆಡ್ಡಿ ಮತ್ತು ಅವರ ನೇತೃತ್ವದ ತಂಡಕ್ಕೆ, ಗಣಿ ಹಗರಣದ ವರದಿಯ ಕಳಂಕಕ್ಕಿಂತಲೂ ಹೊಸ ಮುಖ್ಯಮಂತ್ರಿಯ ಆಯ್ಕೆಯೇ ತಲೆನೋವು.

ಬಿ.ಎಸ್. ಯಡಿಯೂರಪ್ಪ ಅವರನ್ನು ಭಯಬೀಳಿಸಿ ರಾಜಕೀಯ ಅಧಿಕಾರ ಬ್ಲ್ಯಾಕ್‌ಮೇಲ್ ತಂತ್ರಗಳಿಂದ ತಮ್ಮ ಸ್ವಾರ್ಥಸಾಧನೆ ಮಾಡಿಕೊಳ್ಳುತ್ತಲೇ 'ಗಣಿಕುಣಿಕೆ"ಯನ್ನು ಯಡಿಯೂರಪ್ಪ ಅವರಿಗೆ ತಿಳಿಯದಂತೆಯೇ ಬಿಗಿದ ಕೀರ್ತಿ ಜನಾರ್ದನರೆಡ್ಡಿಯದ್ದು ಮತ್ತು ಇವರನ್ನು ಪದೇ ಪದೇ ಬೆಂಬಲಿಸಿದ್ದ ಸುಷ್ಮಾ ಸ್ವರಾಜ್ ಅವರದ್ದು.

ಸರಕಾರ ವಿಸರ್ಜನೆ ಆಗಬೇಕು : ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಮಲಾ ಮರಿಸ್ವಾಮಿ 'ಈ ಸರ್ಕಾರ ವಿಸರ್ಜನೆ ಆಗಬೇಕು. ಗಣಿ ಕಳ್ಳರು ಯಾರೇ ಇರಲಿ, ಎಷ್ಟೇ ಪ್ರಬಲರಿರಲಿ ಜೈಲಿಗೆ ಹೋಗಬೇಕು. ಸ್ವಾರ್ಥಕ್ಕಾಗಿ ಏನೆಲ್ಲಾ ಮಾಡಿ ಬಡ, ಮಧ್ಯಮ ವರ್ಗದ ದುಡಿದುಣ್ಣುವ ಜನರ ಹೊಟ್ಟೆಯ ಮೇಲೆ ಬರೆ ಎಳೆದಿರುವ ಜಿಲ್ಲೆಯ ಗಣಿ ಲೂಟಿಕೋರರು ಎಲ್ಲರೂ ಜೈಲುಪಾಲಾಗಬೇಕು" ಎನ್ನುತ್ತಾರೆ.

ಫಸ್ಟ್ ಈತನ್ನ ಜೈಲಿಗೆ ಹಾಕ್ರಿ : ಲಾರಿ ಚಾಲಕ ಮೊಹಬೂಬ್ 'ಲಾರಿ ಓಡಿಸ್ತಿದ್ದೆ. ದಿನವಿಡೀ ದುಡಿಮೆ. ಈಗ, ಸುಮ್ನೇ ಕೂತಿದ್ದೇವೆ. ಇಷ್ಟಕ್ಕೆಲ್ಲಾ ಜನಾರ್ದನರೆಡ್ಡಿಯೇ ಕಾರಣ. ಫಸ್ಟ್ ಈತನ್ನ ಜೈಲಿಗೆ ಹಾಕ್ರಿ. ನಾವು ನೋಡ್ಬೇಕು. ಈತನ ದುಡ್ಡಿನ ದಾಹಕ್ಕ ನಾವೆಲ್ಲಾ ಬಲಿ ಆದ್ವಿ" ಎನ್ನುತ್ತಾ ಹಸಿದ ಹೊಟ್ಟೆಯನ್ನು ತೋರಿಸುತ್ತಾನೆ.

ವ್ಯಾಮೋಹಿಗಳಿಗೆ ತಕ್ಕಪಾಠ : ಜೆಡಿಎಸ್ ಕಾರ್ಯಕರ್ತರು 'ಇಡೀ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿ ಪದೇ ಪದೇ ಗಣಿಹಣದ ದುರ್ಬಳಕೆ ಮಾಡಿಕೊಂಡ ಬಳ್ಳಾರಿಯ ರೆಡ್ಡಿ ಬ್ರದರ‍್ಸ್ ಸಾಧಿಸಿದ್ದಾದರೂ ಏನು? ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕು. ರೆಡ್ಡಿ ಬ್ರದರ‍್ಸ್ ತಾಳಕ್ಕೆ ಕುಣಿದ ಅಧಿಕಾರದ ಆಸೆಗೆ ಬಲಿಯಾದ ಯಡಿಯೂರಪ್ಪ ಬಲಿ ಆದರು. ಇದು ವ್ಯಾಮೋಹಿಗಳಿಗೆ ತಕ್ಕಪಾಠ" ಎನ್ನುತ್ತಾರೆ.

ಜನಸಾಮಾನ್ಯರಲ್ಲಿ ನಿರ್ಭಾವುಕ ಭಾವವಿದೆ. ಇಡೀ ಸರ್ಕಾರವೇ ವಿಸರ್ಜನೆಗೊಳ್ಳಬೇಕು. ಚುನಾವಣೆಗಳು ನಡೆದು ಜಿಲ್ಲೆಯಲ್ಲಿ ಬಿಜೆಪಿ ವಿಳಾಸವೇ ಇಲ್ಲದಂತೆ ಧೂಳೀಪಟವಾಗಬೇಕು. ಇಲ್ಲವಾದಲ್ಲಿ ದುಡಿದುಣ್ಣುವ ಕೈಗಳಿಗೆ ಬೆಲೆಯೇ ಇಲ್ಲದಂತೆ ಕ್ರೈಂ, ಲೂಟಿ ಹೆಚ್ಚಾಗಲಿದೆ. ಸಂಸ್ಕಾರ, ಶಾಂತಿ - ನೆಮ್ಮದಿಗಳು ಎಲ್ಲವೂ ಕಾಣೆ ಆಗುತ್ತವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಕುಡತಿನಿ, ವೇಣಿವೀರಾಪುರ, ಸಿದ್ಧಮ್ಮನಹಳ್ಳಿ ಸೇರಿ ಬ್ರಹ್ಮಿಣಿ, ಮಿತ್ತಲ್ ಸ್ಟೀಲ್ಸ್‌ಗೆ ಭೂಮಿಯನ್ನು ಕಳೆದುಕೊಂಡಿರುವ ಬಹುತೇಕ ಭೂ ಸಂತ್ರಸ್ತರು 'ನಮಗಂತೂ ಹಾಲು ಸಕ್ರೆ ಕುಡಿದಂಗಾಗೈತೆ ರೀ. ನಮ್ ಭೂಮಿನ ಕಡಿಮೆ ಬೆಲೆಗೆ ಕೊಂಡು ರಿಯಲ್ ಎಸ್ಟೇಟ್ ದಂಧೇ ಮಾಡಿದ್ದ ಆ ರೆಡ್ಡಿ. ಆತನ ವಿರುದ್ಧ ಮಾತಾಡ್ರಿ ನಮ್ಮನ್ನೆಲ್ಲಾ ಕೊಲೆ ಮಾಡ್ತಾನೆ ಅನ್ನೋಂಗಿತ್ತು ನಮ್ ಪರಿಸ್ಥಿತಿ. ಈ ಹಾಳಾದ್ ಪೊಲೀಸ್ರು ಕೂಡ ರೆಡ್ಡಿಯ ಬಿಸ್ಕೇಟ್ ತಿಂದ ನಾಯಿಗಳ ಥರಾನೇ ಇದ್ರು. ಈಗ ನೋಡ್ರಿ, ಇವರಿಗೆ ಮುಂದಿನ ಸರ್ಕಾರದಲ್ಲಿ ಅಧಿಕಾರನೇ ಸಿಗೋದಿಲ್ಲ. ಎಲ್ರೂ ಒಟ್ಟಿಗೇ ಮನೆಗೇ ಅಥವಾ ಜೈಲಿಗೆ.

ಉಪ್ಪು ತಿಂದೋರು... : ಅವ್ರೇ ಹೇಳ್ತಿದ್ರಲ್ಲ 'ಉಪ್ಪು ತಿಂದೋವ್ರು ನೀರು ಕುಡಿಲೇಬೇಕು" ಅಂತಾ. ಈಗ ನೋಡ್ರಿ ಉಪ್ಪು ತಿಂದೋರ‍್ಯಾರು ಅಂತ ಜಗತ್ತಿಗೇ ಗೊತ್ತಾಯ್ತು. ಇನ್ನು, ಕದ್ದುಮುಚ್ಚಿ ನೀರು ಕುಡಿಯೋಕೇ ಬರೋಂಗಿಲ್ಲ. ನಮ್ಮ ಹೊಟ್ಟೆ ಹೊಡ್ರು. ಒಟ್ಟಿಗೇ ಹೋದ್ರು" ಎಂದು ಖಾರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿ ಸೋಮಶೇಖರ ಮಾತನಾಡಿ 'ಹೌದು ಈಗ ಉಪ್ಪು ತಿಂದೋರ‍್ಯಾರು? ಸುಮ್ ಸುಮ್ನೇ ಯಡಿಯೂರಪ್ಪನ್ನ ಹಾಳು ಮಾಡಿ, ತಾವೂ ಹಾಳಾಗಿದ್ದಾರೆ ನಮ್ ರೆಡ್ಡಿಗಳು. ಇವರು ಒಂಥರಾ ಸುಸೈಡಲ್ ಬಾಂಬ್ ಥರಾ. ರೆಡ್ಡಿಗಳನ್ನು ಸಕಾಲದಲ್ಲಿ ವಜಾ ಮಾಡಿ ಗಣಿಹಗರಣ ಕುರಿತು ಸಿಬಿಐ ತನಿಖೆಗೆ ಯಡಿಯೂರಪ್ಪ ಆದೇಶಿಸಿದ್ರೆ ಐದು ವರ್ಷ ಸಿಎಂ ಅವ್ರೇ ಆಗ್ತಿದ್ರು. ಈಗ ನೋಡ್ರಿ, ಸುಷ್ಮಾ ಸ್ವರಾಜೂ ಹೆಲ್ಪ್‌ಗೆ ಬರ‍್ಲಿಲ್ಲ, ರೆಡ್ಡಿಗಳೂ ಸಪೋರ್ಟ್ ಮಾಡೋಂಗಿಲ್ಲ" ಎನ್ನುತ್ತಾನೆ.

ಮಕ್ಳಿಗೆಲ್ಲಾ ನ್ಯೂಸ್ ನೋಡ್ಬೇಡಿ ಅಂತಿದ್ವಿ : ಖಾಸಗಿ ಶಾಲೆಯ ಶಿಕ್ಷಕರಾದ ಉಮಾದೇವಿ, ಕಲೀಂ 'ಅಯೋ ಬಿಡ್ರಿ. ದಿನಾಗ್ಲೂ ಇವರ ಜಗ್ಳ ಇದ್ದಿದ್ದೇ. ನಮಗಂತೂ ರೋಸಿಹೋಗಿತ್ತು. ಹಾಳಾದ್ದು ಟಿವಿ ನೋಡೋಕೇ ಆಗ್ತಿಲ್ಲ. ಮಕ್ಳಿಗೆಲ್ಲಾ ನ್ಯೂಸ್ ನೋಡಬೇಡ್ರಿ ಅಂದಿದ್ವಿ. ಅನ್ಯಾಯವಾಗಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯ್ತು. ಬಳ್ಳಾರಿಯವ್ರ ತೊಂದ್ರೆ ಸಾಕಷ್ಟಿತ್ತು ಬಿಡ್ರಿ" ಎನ್ನುತ್ತಾರೆ.

5ನೇ ತರಗತಿ ವಿದ್ಯಾರ್ಥಿ ಎಚ್.ಎಂ. ಜಯಪ್ರಕಾಶ್, ಬಿಜೆಪಿ ಭ್ರಷ್ಟಾಚಾರದ ಪಕ್ಷವಾಗಿದೆ. ನ್ಯೂಸ್ ಆನ್ ಮಾಡಿದ್ರೆ ಸಾಕು ಬರೀ ಹಗರಣಗಳೇ ಬರ್ತಿವೆ. ಒಂದಂತೂ ಸತ್ಯ ಯಡಿಯೂರಪ್ಪನ ಹಗರಣ ಬಂದಾಗೆಲ್ಲಾ ಕೇಂದ್ರ ಸರ್ಕಾರದ್ದೂ ಏನಾದ್ರೂ ಬಂದು, ರಾಜ್ಯ ಸರ್ಕಾರ ಬಚಾವಾಗುತ್ತೆ. ಈಬಾರಿ ಸಾಕು ಸಾಕು ಇನ್ನು, ರೆಡ್ಡಿಗಳಿಂದ್ಲೇ ಯಡಿಯೂರಪ್ಪ ಭ್ರಷ್ಟಾಚಾರಿ ಅಂತ ರಾಜೀನಾಮೆ ನೀಡಬೇಕಾಗುತ್ತೆ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾನೆ.

ಕಾಂಗ್ರೆಸ್‌ನ ಜಿ. ಆಂಜಿನೇಯಲು, ವಿ.ಕೆ. ಬಸಪ್ಪ ನೇತೃತ್ವದಲ್ಲಿ ನಗರದ ಗಡಿಗೆ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿಗರು 'ಸರ್ಕಾರವಜಾಗೊಳ್ಳಬೇಕು, ಗಣಿಹಗರಣದ ಪಾಲುದಾರರು ಜೈಲು ಸೇರಬೇಕು" ಎಂದು ಘೋಷಣೆಗಳನ್ನು ಕೂಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+