ಶೋಭಾಗೆ ಗಿಟ್ಟದಿದ್ದರೆ ಪಟ್ಟ ಯಾರು ಏರಲಿದ್ದಾರೆ?

"ನಾನು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೆ ಆರೋಪ ಬಂದ ತಕ್ಷಣ ರಾಜೀನಾಮೆ ನೀಡುತ್ತಿದ್ದೆ" ಎಂದು ಸಂತೋಷ ಹೆಗಡೆ ಹೇಳಿದ್ದಾರೆ. "ನೈತಿಕತೆ ಇದ್ದರೆ ಕೂಡಲೆ ಯಡಿಯೂರಪ್ಪ ರಾಜೀನಾಮೆ ನೀಡಬೇಕು" ಎಂದು ಹಳೆ ವೈರಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನುಡಿದಿದ್ದಾರೆ. ಕಾಂಗ್ರೆಸ್ ಅಧಿಕಾರ ಸಿಗದಿದ್ದರೂ ತೊಂದರೆಯಿಲ್ಲ ಯಡಿಯೂರಪ್ಪ ಕೆಳಗಿಳಿಯಲೇಬೇಕು ಎಂದು ಪಟ್ಟುಹಿಡಿದಿದೆ.
ಈ ಎಲ್ಲ ಕೂಗುಗಳಿಗೆ ಉತ್ತರವಾಗಿ, ಮಾರಿಷಸ್ ನಲ್ಲಿ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಜಲಕ್ರೀಡೆಯಾಡುತ್ತಿರುವ ಯಡಿಯೂರಪ್ಪ 'ನಾನ್ಯಾಕೆ ರಾಜೀನಾಮೆ ನೀಡಬೇಕು. ಯಾವುದೇ ಗಣಿಗಾರಿಕೆಗೆ ನಾನು ಪರವಾನಗಿ ನೀಡಿಲ್ಲ' ಎಂದು ಬೆಂಗಳೂರಿಗೂ ಕೇಳುವ ಹಾಗೆ ಕೂಗಿದ್ದಾರೆ. ಅಲ್ಲಿಗೆ ಅವರ ನಿಲುವು, ಜಿಗುಟುತನ ಏನೆಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.
ದೆಹಲಿಯಿಂದ ಬುಲಾವ್ ಬಂದಿದೆ ಎಂಬ ಮಾತು ಕೇಳಿಬಂದಿದೆ. ಕುರ್ಚಿಯಲ್ಲಿ ಅಂಟಿಕೊಳ್ಳುವುದು ಸಾಧ್ಯವಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಒಂದು ವೇಳೆ, ಕುರ್ಚಿ ತಪ್ಪಿದರೆ ಉತ್ತರಾಧಿಕಾರಿ ಯಾರಾಗಬೇಕು ಎಂಬ ಬಗ್ಗೆಯೂ ಯಡಿಯೂರಪ್ಪ ಲೆಕ್ಕಾಚಾರ ಹಾಕಿದಂತಿದೆ. ಬಲ್ಲ ಮೂಲಗಳ ಪ್ರಕಾರ, ಅವರು ಶೋಭಾ ಕರಂದ್ಲಾಜೆ.
ಶೋಭಾ ಕೈಕೆಳಗೆ ಕೆಲಸ ಮಾಡೋದಾ? ಛೆ... ಎಂಬ ಉದ್ಗಾರಗಳನ್ನು ಅನೇಕರು ತೆಗೆದಿದ್ದಾರೆ. ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಶೋಭಾಗೆ ವಿರೋಧದ ಸುನಾಮಿಯೇ ಏಳಲಿದೆ. ಇದೂ ಸಾಧ್ಯವಾಗದಿದ್ದರೆ ಮತ್ತೊಂದು ಆಪ್ಶನ್ ಯಡಿಯೂರಪ್ಪ ಓಪನ್ ಇಟ್ಟಿದ್ದಾರೆ. ಅದೇ, ಅವರ ಮಗ ಸಂಸದ ರಾಘವೇಂದ್ರ ಬಿವೈ.
ಕುಟುಂಬ ರಾಜಕೀಯಕ್ಕೆ ವಿರೋಧವಾಗಿರುವವರು ಇದನ್ನು ಒಪ್ಪುತ್ತಾರಾ? ವೈ ರಾಘವೇಂದ್ರ ಬಿವೈ? ಅಂತ ಕೇಳುವವರ ಸಂಖ್ಯೆಯೂ ದೊಡ್ಡದಿದೆ. ಆರ್ ಅಶೋಕ್, ಹಳೆ ಆಕಾಂಕ್ಷಿ ಜಗದೀಶ್ ಶೆಟ್ಟರ್, ಮಿಸ್ಟರ್ ಕ್ಲೀನ್ ಸುರೇಶ್ ಕುಮಾರ್ ಹೆಸರೇನಾದರೂ ಬಂದರೆ, ನಡೀರಿ ಚುನಾವಣೆಗೆ ಅನ್ನುವವರೆ ಯಡಿಯೂರಪ್ಪ. ಈ ಸಂಕೋಲೆಯನ್ನು ವರಿಷ್ಠರೇ ಬಿಡಿಸಬೇಕು.












Click it and Unblock the Notifications