ನಾವು ಉಪವಾಸ ಇದ್ದೀವಿ ನಮ್ ಕಡೆನೂ ವಸಿ ನೋಡಿ

ಕಾಡಿನಲ್ಲಿ ಸೊಪ್ಪು ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸರಿಯಾದ ಮೇವು ಇಲ್ಲ. ಮತ್ತೊಂದೆಡೆ ಆನೆ ಶಿಬಿರಗಳಿಗೆ ಸರ್ಕಾರದಿಂದ ಬರಬೇಕಾದ ಆಹಾರ ಪದಾರ್ಥಗಳು ಬಾರದಿರುವುದರಿಂದ ಅರೆಹೊಟ್ಟೆಯಲ್ಲಿ ದಿನಕಳೆಯಬೇಕಾದ ದುಸ್ಥಿತಿ ಒದಗಿಬಂದಿದೆ.
ಮತ್ತಿಗೋಡು ಆನೆಶಿಬಿರದಲ್ಲಿ ಸುಮಾರು 17 ಆನೆಗಳು ಆಶ್ರಯಪಡೆದಿದ್ದು, ಇವುಗಳಲ್ಲಿ ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಬಲರಾಮ, ಅಭಿಮನ್ಯು ಸೇರಿದಂತೆ ತುಂಗಾ, ಭೀಮ, ರಾಜೇಂದ್ರ, ಅಶೋಕ, ಗಣೇಶ, ಶೇಖರ, ರವಿ, ಚಾಮುಂಡಿ, ಜಾಕಿ, ಗೋಪಾಲಕೃಷ್ಣ, ಶ್ರೀನಿವಾಸ, ಸೋಮಶೇಖರ, ಕೃಷ್ಣ, ರಾಜೇಶ ಮೊದಲಾದ ಸಾಕಾನೆಗಳಿವೆ.
ದಸರಾ ಸಂದರ್ಭ ರಾಜಾತಿಥ್ಯದೊಂದಿಗೆ ಭೂರಿಭೋಜನ ಸ್ವೀಕರಿಸುವ ಬಲರಾಮ ಹಾಗೂ ಅಭಿಮನ್ಯು ಇದೀಗ ಶಿಬಿರದಲ್ಲಿ ಸರಿಯಾದ ಆಹಾರವಿಲ್ಲದೆ ದಿನಕಳೆಯುವಂತಾಗಿದೆ.
ಸಮಸ್ಯೆಗಳ ಆಗರ: ಮತ್ತಿಗೋಡು ಆನೆಶಿಬಿರದಲ್ಲಿ ಸುಮಾರು ಹದಿನೇಳು ಸಾಕಾನೆಗಳಿದ್ದು, ಈ ಶಿಬಿರಕ್ಕೆ ಬೇಕಾದ ಸೌಲಭ್ಯವನ್ನು ಒದಗಿಸುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿರುವುದರಿಂದಾಗಿ ಆನೆಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ.
ಸೂಕ್ತವಾದ ನೀರಿನ ತೊಟ್ಟಿಗಳಿಲ್ಲದೆ ಇರುವುದರಿಂದಾಗಿ ಆನೆಗಳು ಬೋರ್‌ವೆಲ್‌ನಲ್ಲಿ ನೀರು ಕುಡಿಯುವಂತಾಗಿದೆ. ಬೋರ್‌ವೆಲ್‌ನಲ್ಲಿ ಪಂಪ್ ಮಾಡಿ ಆನೆಗಳಿಗೆ ನೀರು ಕುಡಿಸುವ ವೇಳೆಗೆ ಕಾವಡಿಗಳು ಸುಸ್ತಾಗಿ ಹೋಗುತ್ತಾರೆ. ಇನ್ನು ಸ್ನಾನ ಮಾಡಿಸಬೇಕೆಂದರೆ ಮಾವುತ ಹಾಗೂ ಕಾವಾಡಿಗಳ ಪರಿಸ್ಥಿತಿ ಏನಾಗಬಹುದು ನೀವೇ ಯೋಚಿಸಿ.
ಈ ನಡುವೆ ಕಳೆದ ಮೂರು ತಿಂಗಳಿಂದ ಈ ಶಿಬಿರಕ್ಕೆ ಬರಬೇಕಾದ ರಾಗಿ, ಹುರುಳಿ, ಬೆಲ್ಲ, ಭತ್ತದ ಹುಲ್ಲುಗಳು ಬಾರದೆಯಿರುವುದರಿಂದ ಆಹಾರ ಸಮಸ್ಯೆ ಎದುರಾಗಿದೆ. ಜೊತೆಗೆ 17 ಆನೆಗಳ ಪೈಕಿ ಕೇವಲ ಆರು ಆನೆಗಳಿಗೆ ಮಾತ್ರ ನೋಡಿಕೊಳ್ಳಲು ಕಾವಾಡಿಗರಿದ್ದರೆ, ಉಳಿದ ಹನ್ನೊಂದು ಆನೆಗಳಿಗೆ ಕಾವಡಿಗರೇ ಇಲ್ಲವಾಗಿದೆ. ಇದರಿಂದಾಗಿ ಕಾಡಿನಲ್ಲಿ ಆನೆಗಳನ್ನು ಮೇಯಿಸಿಕೊಂಡು ಬರುವುದು ಕಷ್ಟಸಾಧ್ಯವಾಗಿದೆ.
ಅಲ್ಲದೆ ಶಿಬಿರದಲ್ಲಿ ಸಮರ್ಪಕ ಆಹಾರ ಸಿಗದಿರುವುದರಿಂದಾಗಿ ಕಾಡಿಗೆ ಹೋದ ಆನೆಗಳು ಮರಳಿ ಶಿಬಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಅವುಗಳನ್ನು ಅಟ್ಟಿಸಿಕೊಂಡು ಬರುವುದು ಕಾವಾಡಿಗರು ಮತ್ತು ಮಾವುತರಿಗೆ ಕಠಿಣಕಾರ್ಯವಾಗಿ ಪರಿಣಮಿಸಿದೆ.
ಮಾವುತರಿಗೆ ಜೋಪಡಿಗಳೇ ಅರಮನೆ: ಈ ಆನೆಶಿಬಿರದಲ್ಲಿ ವಿದ್ಯುತ್ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯವೂ ಇಲ್ಲವಾಗಿದೆ. ಜೊತೆಗೆ ಆನೆಗಳ ಚಾಕರಿ ಮಾಡುವ ಮಾವುತ ಹಾಗೂ ಕಾವಡಿಗಳ ಪೈಕಿ ಕೇವಲ ಎಂಟು ಕುಟುಂಬಗಳಿಗೆ ಮನೆಗಳಿವೆ.
ಉಳಿದವರ ಪಾಲಿಗೆ ಬಿದಿರಿನ ಜೋಪಡಿಯೇ ಅರಮನೆಯಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸದಿರುವ ಬಗ್ಗೆ ಕಾವಡಿಗರ ಅಸಮಾಧಾನವಿದೆ. ಆನೆಶಿಬಿರದಲ್ಲಿ ಹತ್ತಾರು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಏನೂ ಸಮಸ್ಯೆಯಿಲ್ಲ ಎಲ್ಲವೂ ಸರಿಯಾಗಿಯೇ ಇದೆ ಎಂಬ ಉತ್ತರವನ್ನು ನೀಡಿ ನುಣುಚಿಕೊಳ್ಳುತ್ತಾರೆ. ಆದರೆ ಅರೆಹೊಟ್ಟೆಯಲ್ಲಿ ದಿನಕಳೆಯುತ್ತಿರುವ ಸಾಕಾನೆಗಳ ಸಂಕಟ ಯಾರಿಗೂ ಗೊತ್ತಾಗುತ್ತಿಲ್ಲ ಎಂಬುವುದೇ ನೋವಿನ ಸಂಗತಿ.












Click it and Unblock the Notifications