ಕಟ್ಟಾ ಸುಬ್ರಮಣ್ಯ ನಾಯ್ಡು ಯಾವುದೇ ಕ್ಷಣ ಬಂಧನ

Katta Subramanya Naidu
ಬೆಂಗಳೂರು, ಜು 7: ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಲೋಕಾಯುಕ್ತ ಪೊಲೀಸರಿಗೆ ಬುಧವಾರ ಅನುಮತಿ ನೀಡಿದ್ದಾರೆ.

ತನಿಖೆಯನ್ನು ಪೂರ್ಣಗೊಳಿಸಿದ್ದ ಲೋಕಾಯುಕ್ತ ಪೊಲೀಸರು, ಪ್ರಕರಣ ನಡೆದ ಸಂದರ್ಭದಲ್ಲಿ ಕಟ್ಟಾ ಅವರು ಸಚಿವರಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ರಾಜ್ಯಪಾಲರ ಅನುಮತಿ ಕೋರಿ ಸೋಮವಾರ ಪ್ರಸ್ತಾವ ಸಲ್ಲಿಸಿದ್ದರು. ತನಿಖಾ ತಂಡ ಸಲ್ಲಿಸಿದ್ದ ಅಂತಿಮ ವರದಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ರಾಜ್ಯಪಾಲರು, ಬುಧವಾರ ಮಧ್ಯಾಹ್ನ ಒಪ್ಪಿಗೆ ಸೂಚಿಸಿದರು. ಇದರೊಂದಿಗೆ ಕರ್ನಾಟಕ ಲೋಕಾಯುಕ್ತ ಇತಿಹಾಸದಲ್ಲೇ ಮೊದಲ ಬಾರಿಗೆ ಮಾಜಿ ಸಚಿವರೊಬ್ಬರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ವೇದಿಕೆ ಸಿದ್ಧವಾಗಿದೆ.

ವಿವಾದಿತ ಇಟಾಸ್ಕಾ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಂಪೆನಿಗೆ ಕೆಐಎಡಿಬಿ ಮೂಲಕ 325 ಎಕರೆ ಭೂಮಿ ಮಂಜೂರು ಮಾಡಲು 87 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪದ ಮೇಲೆ ಕಳೆದ ಡಿಸೆಂಬರ್ 2ರಂದು ಆಗಿನ ವಸತಿ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಅವರ ಪುತ್ರ, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಸೇರಿದಂತೆ ಹಲವರ ವಿರುದ್ಧ ಲೋಕಾಯುಕ್ತ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

ಇಟಾಸ್ಕಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ಶ್ರೀನಿವಾಸ್, ಸಚಿವ ಕಟ್ಟಾ ಸಹಚರರಾದ ಜಗ್ಗಯ್ಯ, ವೆಂಕಯ್ಯ, ಶ್ರೀನಿವಾಸಮೂರ್ತಿ, ಯುನೈಟೆಡ್ ಟೆಲಿಕಾಂ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಸವಪೂರ್ಣಯ್ಯ, ಕೆಐಎಡಿಬಿಯ ಹಿಂದಿನ ವಿಶೇಷ ಜಿಲ್ಲಾಧಿಕಾರಿ ವಿಜಯ್‌ಶಂಕರ್, ಕೆಐಎಡಿಬಿ ಹಿಂದಿನ ವಿಶೇಷ ಭೂಸ್ವಾಧೀನಾಧಿಕಾರಿ ಟಿ.ಪಿ.ಮುನಿನಾರಾಯಣಪ್ಪ ಸೇರಿದಂತೆ ಹಲವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ನಿಗದಿತ ಅರ್ಹತೆಗಳಿಲ್ಲದೇ ಇದ್ದರೂ 2006ರಲ್ಲಿ ಇಟಾಸ್ಕಾ ಕಂಪೆನಿಗೆ 325 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕಟ್ಟಾ ಕೈಗಾರಿಕಾ ಸಚಿವರಾಗಿದ್ದರು. ಆಗ ಇಟಾಸ್ಕಾ ಕಂಪೆನಿಯ ಕಡೆಯಿಂದ 87 ಕೋಟಿ ರೂಪಾಯಿ, ಅವರ ಕುಟುಂಬದ ಬೇನಾಮಿ ಕಂಪೆನಿಯಾದ ಇಂದೂ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಖಾತೆಗೆ ಸಂದಾಯ ಆಗಿತ್ತು ಎಂಬುದನ್ನು ತನಿಖಾ ತಂಡ ಪತ್ತೆಹಚ್ಚಿತ್ತು.

ವಾರದೊಳಗೆ ಆರೋಪಪಟ್ಟಿ: ರಾಜ್ಯಪಾಲರ ಅನುಮತಿ ದೊರೆತಿರುವ ಕುರಿತು ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, 'ನಮ್ಮ ಪೊಲೀಸರು ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದು, ಆರೋಪಪಟ್ಟಿ ಸಿದ್ಧಪಡಿಸಿದ್ದಾರೆ. ಈಗ ರಾಜ್ಯಪಾಲರು ಅನುಮತಿ ನೀಡಿರುವುದರಿಂದ ವಾರದೊಳಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗುವುದು' ಎಂದರು.

ಕಟ್ಟಾ ಜಗದೀಶ್ ಕೂಡ ಈ ಪ್ರಕರಣದಲ್ಲಿ ಆರೋಪಿ. ಆದರೆ ಪ್ರಕರಣ ನಡೆದ ಸಂದರ್ಭದಲ್ಲಿ ಅವರು ಪಾಲಿಕೆ ಸದಸ್ಯರಾಗಿರಲಿಲ್ಲ. ಆದ್ದರಿಂದ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸರ್ಕಾರದ ಅನುಮತಿ ಅಗತ್ಯವಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 25,000 ಪುಟಗಳಷ್ಟು ದಾಖಲೆಗಳನ್ನು ಒಳಗೊಂಡಿರುವ ಆರೋಪಪಟ್ಟಿಯನ್ನು ತನಿಖಾ ತಂಡ ಸಿದ್ಧಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+