ಶ್ರೀನಗರ ಗೃಹಿಣಿ ಅರುಣಾ ಕೊರಳ ಕೊಯ್ದ ಪಾತಕಿ ಯಾರು?

ಹನುಮಂತನಗರ, ಶ್ರೀನಗರ, ಬಸವನಗುಡಿ ಏರಿಯಾ ಅಂದ್ರೆ ತುಂಬಾ ಸೇಫ್ ಎನ್ನಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಒಂಟಿ ಮಹಿಲೆ ಹತ್ಯೆ ಹೆಚ್ಚುತ್ತಿದ್ದು, ನಾಗರೀಕರು ಆತಂಕಗೊಂಡಿದ್ದಾರೆ. ಶ್ರೀನಗರ 13ನೇ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ನಾಲ್ಕನೆ ಅಂತಸ್ತಿನಲ್ಲಿ ಅರುಣಾ ಮನೆಯಿದೆ. ನಾಲ್ಕನೇ ಮಹಡಿ ತಲುಪಿ ಕೊಲೆ ಮಾಡಬೇಕಾದರೆ ಇದು ಯಾರೋ ಗೊತ್ತಿರುವವರೇ ಮಾಡಿರುವ ಕೆಲಸ ಎಂದು ಶಂಕಿಸಲಾಗಿದೆ.
ಪ್ರತಿದಿನ ಮಧ್ಯಾಹ್ನ 12 ರ ನಂತರ ಪತಿಗೆ ಊಟ ತರುತ್ತಿದ್ದ ಅರುಣಾ, 12.30 ದಾಟಿದರೂ ಕಾಣದಿದ್ದಾಗ, ಸೋಮೇಶ್ ಮನೆಗೆ ಕರೆ ಮಾಡಿದ್ದಾರೆ. ಆದರೆ, ಉತ್ತರ ಬರದಿದ್ದಾಗ, ಗಾಬರಿಗೊಂಡು ಮನೆಗೆ ಬಂದು ನೋಡಿದರೆ, ಅರುಣಾ ಕತ್ತು ಕತ್ತರಿಸಲ್ಪಟ್ಟಿತ್ತು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಜಂಟಿ ಆಯುಕ್ತ ಅಲೋಕ್ ಕುಮಾರ್ ಹಾಗೂ ದಕ್ಷಿಣ ವಲಯ ಡಿಸಿಪಿ ಸೋನಿಯಾ ನಾರಂಗ್ ಅವರು ಪರಿಶೀಲನೆ ನಡೆಸಿದ್ದಾರೆ. ಶವದ ಮೈಮೇಲಿದ್ದ ಆಭರಣ ಕೂಡಾ ಮುಟ್ಟಿಲ್ಲ. ಹಾಗಾಗಿ ಇದು ಅಪರಿಚಿತರ ಕೃತ್ಯವಲ್ಲ. ಆದರೆ, ಕೊಲೆಗೈದವರ ಬೆರಳಚ್ಚು ಸಂಗ್ರಹವಾಗಿದೆ. ಬೆಳಗ್ಗೆ 8.30 ರಿಂದ 11.30 ರ ಸಮಯದಲ್ಲಿ ಈ ಘಟನೆ ಸಂಭವಿಸಿರಬಹುದು. ತನಿಖೆ ಮುಂದುವರೆದಿದೆ ಎಂದು ಡಿಸಿಪಿ ನಾರಂಗ್ ಹೇಳಿದರು.
ನಿಲ್ಲದ ಮಕ್ಕಳ ಆಕ್ರಂದನ: ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕಿನವರಾದ ಸೋಮೇಶ್ ಹಾಗೂ ಅರುಣಾ ದಂಪತಿ ಮದುವೆಯಾಗಿ 12 ಸುಖ ವರ್ಷಗಳನ್ನು ಕಳೆದಿದ್ದರು. ನಿಹಾರಿಕಾ(11) ಹಾಗೂ ತ್ರಿಶತಿ(8) ಎಂಬ ಮಕ್ಕಳಿದ್ದಾರೆ. ಮುನೇಶ್ವರ ಬ್ಲಾಕ್ ನಲ್ಲಿ ವಾಸವಾಗಿದ್ದ ಈ ಕುಟುಂಬ ಇತೀಚೆಗೆ ಈ ಮನೆಗೆ ಶಿಫ್ಟ್ ಆಗಿದ್ದರು.
ಅರುಣಾ ಲ್ಯಾಬ್ ಟೆಕ್ನಿಷಿನ್ ಆಗಿದ್ದರೆ, ಸೊಮೇಶ್ ಪದವೀಧರರಾಗಿದ್ದು,ಮನೆ ಪಕ್ಕದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಮಗಳು ನಿಹಾರಿಕಾ ಇವರ ಜೊತೆ ವಾಸವಾಗಿದ್ದರೆ, ಮಾವ ಬಾಲು ಎಂಬುವವರ ಮನೆಯಲ್ಲಿ ತ್ರಿಶತಿ ಇದ್ದಾಳೆ. ಇಬ್ಬರು ಮಕ್ಕಳು ತಾಯಿಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.












Click it and Unblock the Notifications