ಜುಲೈ1ರಿಂದ ಬೆಂಗಳೂರು- ಮೈಸೂರಿಗೆ 2 ಹೊಸ ರೈಲು

ಬೆಂಗಳೂರು ಪೂರ್ವ ರೈಲ್ವೆ ನಿಲ್ದಾಣದಲ್ಲಿ ನೂತನ ಟಿಕೆಟ್ ಕಾಯ್ದಿರಿಸುವ ಕಚೇರಿ ಹಾಗೂ ದಂಡು ರೈಲು ನಿಲ್ದಾಣದಲ್ಲಿ 'ಫುಡ್ ಪ್ಲಾಜಾ'ವನ್ನು ಇತ್ತೀಚೆಗೆ ಉದ್ಘಾಟಿಸಿದ ಸಂದರ್ಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಈ ವಿಷಯ ತಿಳಿಸಿದ್ದಾರೆ.
ಬಜೆಟ್‌ನಲ್ಲಿ ಪ್ರಕಟಿಸಿದಂತೆ ಬೆಂಗಳೂರು- ಮೈಸೂರು ನಡುವೆ ಈ ಹೊಸ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ. ಎರಡೂ ರೈಲುಗಳು ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ನಿಲ್ದಾಣಗಳಲ್ಲಿ ನಿಲ್ಲಲಿವೆ. ಮಹಿಳೆಯರಿಗಾಗಿ ಪ್ರತ್ಯೇಕ ಕಂಪಾರ್ಟ್ ಮೆಂಟ್ ಇರುತ್ತದೆ.
'ರಾಜ್ಯ ರಾಣಿ' ಎಕ್ಸ್‌ಪ್ರೆಸ್ ರೈಲು ಪ್ರತಿ ದಿನ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 8.15ಕ್ಕೆ ಹೊರಟು 11.15ಕ್ಕೆ ಮೈಸೂರು ತಲುಪಲಿದೆ. ಇನ್ನು, ಯಶವಂತಪುರ- ಮೈಸೂರು ನಡುವೆ ಮತ್ತೊಂದು ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 10.10ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಮೈಸೂರು ತಲುಪಲಿದೆ.
ಮೈಸೂರು-ಚೆನ್ನೈ ರೈಲು ಜುಲೈ 6ರಿಂದ ವಾರಕ್ಕೊಮ್ಮೆ: ಮೈಸೂರು ರೈಲ್ವೆ ವಿಭಾಗವು ಮೈಸೂರು ಮತ್ತು ಚೆನ್ನೈ ಮಧ್ಯೆ ಜುಲೈ 6ರಿಂದ ವಾರಕ್ಕೊಮ್ಮೆ ಹೊಸ ರೈಲು ಓಡಿಸಲಿದೆ. ಬುಧವಾರ ಮೈಸೂರಿನಿಂದ ಹೊರಟು ಗುರುವಾರ ಚೆನ್ನೈ ತಲುಪಲಿದೆ. ಇದು ಮಂಡ್ಯ, ಕೆಂಗೇರಿ, ಬೆಂಗಳೂರು, ಕೆ.ಆರ್. ಪುರಂ, ಬಂಗಾರಪೇಟೆ, ಜೋಲಾರ್ ಪೇಟೆ, ಕಾಟ್ಪಾಡಿ, ಅರಕ್ಕೋಣಂ ಮತ್ತು ಪೆರಂಬೂರಿನಲ್ಲಿ ನಿಲುಗಡೆ ಹೊಂದಿದೆ. ಇದರಲ್ಲೂ ಮಹಿಳೆಯರಿಗಾಗಿ ಪ್ರತ್ಯೇಕ ಕಂಪಾರ್ಟ್ ಮೆಂಟ್ ಇರುತ್ತದೆ.
ಬರಲಿವೆ ನಿಲ್ದಾಣಗಳಲ್ಲಿ ಫುಡ್ ಪ್ಲಾಜಾಗಳು: 'ಪ್ರಯಾಣಿಕರಿಗೆ ಸಕಾಲದಲ್ಲಿ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸುವ ಉದ್ದೇಶದಿಂದ ರೈಲು ನಿಲ್ದಾಣಗಳಲ್ಲಿ ಫುಡ್ ಪ್ಲಾಜಾಗಳನ್ನು ಪ್ರಾರಂಭಿಸಲಾಗುತ್ತಿದೆ. ಸದ್ಯದಲ್ಲಿಯೇ ನಗರದ ಕೆ.ಆರ್. ಪುರ, ಹೊಸೂರು, ಬೆಳಗಾವಿ ರೈಲು ನಿಲ್ದಾಣಗಳಲ್ಲಿ ಫುಡ್ ಪ್ಲಾಜಾಗಳು ಆರಂಭವಾಗಲಿವೆ. ಜತೆಗೆ, ಬೆಂಗಳೂರು ನಗರ ರೈಲು ನಿಲ್ದಾಣದ ಮಾದರಿಯಲ್ಲಿ ದಂಡು ನಿಲ್ದಾಣದಲ್ಲಿಯೂ ಹೊಸ ಮಾದರಿ ರೈಲು ಮಾರ್ಗ ನಿರ್ಮಿಸುವ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುವುದು' ಎಂದು ಅವರು ವಿವರಿಸಿದ್ದಾರೆ.











Click it and Unblock the Notifications