ಎಲ್ ಪಿ ಜಿ, ಡೀಸೆಲ್, ಸೀಮೆಎಣ್ಣೆ ಬೆಲೆ ಏರಿಕೆ

ಎಲ್ ಪಿ ಜಿ ಸಿಲಿಂಡರ್ ಬೆಲೆಯಲ್ಲಿ 50 ರು., ಡೀಸೆಲ್ ಬೆಲೆಯಲ್ಲಿ 3 ರು. ಮತ್ತು ಸೀಮೆಎಣ್ಣೆ ಬೆಲೆಯಲ್ಲಿ 2 ರು. ಜಾಸ್ತಿ ಮಾಡಿದ್ದು, ಶುಕ್ರವಾರ ಮಧ್ಯರಾತ್ರಿಯಿಂದಲೇ ನೂತನ ಬೆಲೆಗಳು ಜಾರಿಗೆ ಬರಲಿವೆ. ವಿತ್ತ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಉನ್ನತ ಸಚಿವರ ಸಮಿತಿ ಬಡನಾಗರಿಕರಿಗೆ ಬೆಲೆ ಏರಿಕೆಯ 'ಬಳುವಳಿ' ನೀಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರಿಂದ ತೈಲ ಕಂಪನಿಗಳು ಪ್ರತಿದಿನ 456 ಕೋಟಿ ರು. ನಷ್ಟ ಅನುಭವಿಸುತ್ತಿವೆ ಎಂದು ಹೇಳಿವೆ. ಡೀಸೆಲ್ ಮೇಲಿನ ಅಬಕಾರಿ ಸುಂಕ (ಲೀ.ಗೆ 4.60ಯಿಂದ 2 ರು.ಗೆ) ಮತ್ತು ಕಚ್ಚಾ ತೈಲದ ಮೇಲಿನ ಸೀಮಾ ಸುಂಕ (ಶೇ.5) ಇಳಿಸಿದ್ದರಿಂದ ಕಂಪನಿಗಳಿಗೆ ವಾರ್ಷಿಕ 21 ಸಾವಿರ ಕೋಟಿ ರು. ಇಳಿಕೆಯಾಗಲಿದೆ.
ಆದರೆ, ಹೊರೆ ಬಿದ್ದಿರುವುದು ಮಾತ್ರ ಬಡಪಾಯಿ ನಾಗರಿಕರ ಮೇಲೆ. ಅಬಕಾರಿ ಸುಂಕ ಮತ್ತು ಸೀಮಾ ಸುಂಕವನ್ನು ಕೇಂದ್ರ ಇಳಿಸಿರದಿದ್ದರೆ ಬಡಜನರ ಸ್ಥಿತಿ ಗೋವಿಂದ ಗೋವಿಂದ. ಕಳೆದ ವರ್ಷ ಕೂಡ ಇದೇ ದಿನ ಎಲ್ ಪಿ ಜಿ ಮೇಲೆ 35 ರು., ಡೀಸೆಲ್ ಮೇಲೆ 2 ರು. ಮತ್ತು ಸೀಮೆಎಣ್ಣೆಯ ಮೇಲೆ 3 ರು. ಏರಿಸಲಾಗಿತ್ತು. ಎಲ್ ಪಿ ಜಿ ಬಳಕೆಗೆ ಪರ್ಯಾಯವೇನು ಎಂಬ ಪ್ರಶ್ನೆಯನ್ನು ನಾಗರಿಕರು ತಮ್ಮನ್ನೇ ತಾವು ಕೇಳಿಕೊಂಡು ಉತ್ತರ ಕಂಡುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಇಂದು ಎದುರಾಗಿದೆ.
ಬಸ್ ದರವೂ ತುಟ್ಟಿ : ತೈಲ ಬೆಲೆ ಏರಿದರೆ ಉಳಿದ ವಸ್ತುಗಳ ಬೆಲೆ ಏರಿಕೆಯ ಸರಮಾಲೆ ಪ್ರಾರಂಭ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ದರಗಳನ್ನು ಏರಿಸುವುದಾಗಿ ನಾಗರಿಕರಿಗೆ ಮುನ್ನೆಚ್ಚರಿಕೆ ನೀಡಿವೆ. ಈ ಕುರಿತಾಗಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಇನ್ನೆರಡು ದಿನಗಳಲ್ಲಿ ಪ್ರಯಾಣ ದರ ತುಟ್ಟಿಯಾಗುವುದು ಹೆಚ್ಚೂ ಕಡಿಮೆ ಖಚಿತವಾಗಿದೆ.












Click it and Unblock the Notifications