27 ರಂದು ಸಿಎಂ ಮನೆ ಮುಂದೆ ಗೌಡ್ರ ಉಪವಾಸ ಸತ್ಯಾಗ್ರಹ

ಜನತಾದಳ ವರಿಷ್ಠ ದೇವೇಗೌಡ ಜೂನ್ 27ರಂದು ಸಿಎಂ ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಹಾಸನ ಜಿಲ್ಲೆಯ ಅಭಿವೃದ್ದಿ ಯೋಜನೆಗಳಿಗೆ ಸರಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಕಳೆದ ಬುಧವಾರ (ಜೂ 23) ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೌಡ್ರು ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಆದರೆ ಇದುವರೆಗೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನಲೆಯಲ್ಲಿ ಜೂನ್ 27 ರಂದು ಮುಖ್ಯಮಂತ್ರಿ ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಹಾಸನ ಜಿಲ್ಲೆಯನ್ನು ಸರಕಾರ ಸಂಪೂರ್ಣ ಕಡೆಗಣಿಸಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮತ್ತು ರೇವಣ್ಣ ಜಿಲ್ಲೆಯ ಉಸ್ತುವಾರಿ ಸಚಿವಾರಾಗಿದ್ದ ಕಾಲದಲ್ಲಿ ಜಿಲ್ಲೆಯಲ್ಲಿ ಕೈಗೆತ್ತಿ ಕೊಂಡಿದ್ದ ಯೋಜನೆಗಳಿಗೆ ಕೂಡ ಸರಕಾರ ಅಡ್ಡಗಾಲು ಹಾಕಿದೆ ಎಂದು ಆರೋಪಿಸಿದರು.
ತಮ್ಮ ಮನೆಯೊಳಗೇ ಕಳ್ಳರನ್ನು ಇಟ್ಟುಕೊಂಡ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತಾನಾಡುತ್ತೆ. ಸಿಎಂ ಧರ್ಮಸ್ಥಳಕ್ಕೆ ಬನ್ನಿ ಎಂದು ಸವಾಲು ಹಾಕಿರುವುದರಿಂದ ಕುಮಾರಸ್ವಾಮಿ ಒಪ್ಪಿ ಕೊಳ್ಳ ಬೇಕಾಯಿತು. ಇಲ್ಲವಾದಲ್ಲಿ ಕೇಸರಿ ಪಡೆಗಳು ಕುಮಾರಸ್ವಾಮಿಯನ್ನು ಸುಳ್ಳುಗಾರ ಎಂದು ಬಿಂಬಿಸುತ್ತಿದ್ದವೆಂದು ಗೌಡ್ರು ಲೇವಡಿ ಮಾಡಿದ್ದಾರೆ.
ಸಿಎಂ ಮನೆ ಮುಂದೆ ಧರಣಿ ನಡೆಸಿಯೇ ತೀರುತ್ತೇನೆ. ನನ್ನನ್ನಾಗಲಿ ನನ್ನ ಪಕ್ಷದ ಕಾರ್ಯಕರ್ತರನ್ನು ಸರಕಾರ ಅರೆಸ್ಟ್ ಮಾಡಿದರೂ ತೊಂದರೆಯಿಲ್ಲ. ಈ ಭ್ರಷ್ಟ ಸರಕಾರದ ವಿರುದ್ದ ನನ್ನ ಕೊನೆಯುಸಿರುವರೆಗೆ ಹೋರಾಟ ಮಾಡುತ್ತೇನೆ ಎಂದು ದೊಡ್ಡ ಗೌಡ್ರು ಸರಕಾರಕ್ಕೆ ಸವಾಲೆಸೆದಿದ್ದಾರೆ.












Click it and Unblock the Notifications